ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಎದುರಾಗಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪ್ರಜ್ವಲ್‌ಗೆ ಸದ್ಯಕ್ಕಂತೂ ಬಿಡುಗಡೆಯ ಭಾಗ್ಯವಿಲ್ಲ. 2ನೇ ಬಾರಿಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ, ಗಜಾನನ ಭಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಖಡಕ್ ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಹಾಗೂ ಸಿಐಡಿ ಠಾಣೆಗಳಲ್ಲಿ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಕೇಸ್ ದಾಖಲಾಗಿತ್ತು. ಲೋಕಸಭಾ ಚುನಾವಣೆ ಮತದಾನ ಮುಗಿದ ತಕ್ಷಣವೇ, ದೇಶದಿಂದಲೇ ಪ್ರಜ್ವಲ್ ಅವರು ಎಸ್ಕೇಪ್ ಆಗಿದ್ದರು. ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ, 2024ರ ಮೇ ತಿಂಗಳಲ್ಲಿ ಪ್ರಜ್ವಲ್ ಬಂಧನವಾಗಿತ್ತು. 35 ದಿನಗಳ ಬಳಿಕ ಜರ್ಮನಿಯಿಂದ ಪ್ರಜ್ವಲ್ ಬಂದಿದ್ದ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ, ಮಹಿಳಾ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದ.
ಕಳೆದ 14 ತಿಂಗಳಿಂದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದಾರೆ. ಮೊದಲ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂಕೋರ್ಟ್ ವಜಾಗೊಳಿಸಿದ್ದವು. ಮತ್ತೊಮ್ಮೆ ಕಳೆದ ಜೂನ್ ತಿಂಗಳಲ್ಲಿ ಎರಡನೇ ಅರ್ಜಿ ಸಲ್ಲಿಸಿದ್ರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಹೇಳಿತ್ತು. ಹೀಗಾಗಿ 2ನೇ ಬಾರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ, ಜಾಮೀನು ಅರ್ಜಿ ಸಲ್ಲಿಸಿದ್ರು.