ಜೋರಾಯ್ತು ಭಗವದ್ಗೀತೆ ವಿವಾದ : ಮುಸ್ಲಿಂ ಓಲೈಕೆಗಾಗಿ ಹುಚ್ಚು ಮಾತು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ತಕ್ಕ ಘನತೆ ಮತ್ತು ಗಾಂಭೀರ್ಯ ಕಳೆದುಕೊಂಡಿದ್ದಾರೆ; ಮುಸ್ಲಿಂ ಓಲೈಕೆಗೆ ಅತಿಯಾದ ಪ್ರಯತ್ನದಲ್ಲಿ ಅಸಂಬದ್ಧ ಹೇಳಿಕೆಗಳನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ಟೀಕೆ ಮಾಡಿದ್ದಾರೆ.

ಭಗವದ್ಗೀತೆ ಓದುವವರು ‘ಮನುವಾದಿಗಳು’ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, “ಮುಖ್ಯಮಂತ್ರಿಯ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಬೇಜವಾಬ್ದಾರಿಯ ಹೇಳಿಕೆ ಬೇಸರ ತಂದಿದೆ. ಸಿಎಂ ಕೂಡಲೇ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದರು.

“ಭಗವದ್ಗೀತೆ ವಿಶ್ವದ ಕೋಟ್ಯಂತರ ಜನರಿಗೆ ಜ್ಞಾನ ನೀಡಿರುವ ಮಹತ್ತಾದ ಗ್ರಂಥ. ಮಹಾತ್ಮ ಗಾಂಧಿಯವರ ಜೀವನಕ್ಕೂ ಇದು ಮಾರ್ಗದರ್ಶಕ. ಇಂತಹ ಗ್ರಂಥವನ್ನು ಓದುವವರನ್ನು ‘ಮನುವಾದಿಗಳು’ ಎಂದು ಕರೆಯುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಅವರಿಗೆ ಧೈರ್ಯ ಇದ್ದರೆ ಕುರಾನ್ ಅಥವಾ ಬೈಬಲ್ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿ ನೋಡಲಿ; ಮಾತನಾಡಿದ ಕ್ಷಣದಲ್ಲೇ ಅವರು ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ” ಎಂದು ಈಶ್ವರಪ್ಪ ಹೇಳಿದರು.

ಬಾಬರ್ ಮಸೀದಿ ವಿಚಾರ ಎತ್ತಿಕೊಂಡ ಈಶ್ವರಪ್ಪ, ಬಾಬರ್‌ಗೆ ಈ ದೇಶದ ಜೊತೆ ಸಂಬಂಧವೇ ಇಲ್ಲ. ಹಿಂದೂ ಸಮಾಜದ ಶ್ರಮವನ್ನು ದುರುಪಯೋಗ ಮಾಡಿಕೊಂಡು ಅಯೋಧ್ಯೆಯಲ್ಲಿ ಕಟ್ಟಲಾದ ಬಾಬರಿ ಮಸೀದಿ ಮತ್ತೆ ನಿರ್ಮಿಸಿದರೆ, ಹಿಂದೂ ಸಮಾಜ ಯಾವುದಕ್ಕೂ ಒಪ್ಪುವುದಿಲ್ಲ. ಮತ್ತೆ ಧ್ವಂಸ ಮಾಡುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು. ಮಥುರಾ ಮತ್ತು ಕಾಶಿಯನ್ನು ಹಿಂದೂಗಳಿಗೆ ಹಿಂತಿರುಗಿಸಿ, ಮಂದಿರ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ವಿನಂತಿ ಮಾಡಿದರು.

ಗೋಹತ್ಯೆ ಪ್ರತಿಬಂಧಕ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಕಾಂಗ್ರೆಸ್ ಮುಂದಾಗಿರುವುದನ್ನು ಈಶ್ವರಪ್ಪ ಕಾಂಗ್ರೆಸ್‌ನ ಕೆಟ್ಟ ಪರಂಪರೆಯ ಮುಂದುವರಿಕೆ ಎಂದು ಟೀಕಿಸಿದರು. ಕಾಂಗ್ರೆಸ್ ನಾಯಕರ ಮನೆಯ ಹೆಣ್ಣು ಮಕ್ಕಳು ಸಹ ಈ ಕ್ರಮವನ್ನು ವಿರೋಧಿಸುತ್ತಾರೆ” ಎಂದರು. ಸಿದ್ದರಾಮಯ್ಯ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ‘ಅವಳು–ಇವಳು’ ಎಂದು ಮಾತನಾಡಿದ್ದನ್ನು ಖಂಡಿಸಿದ ಈಶ್ವರಪ್ಪ, ನಾನು ಸಿದ್ದರಾಮಯ್ಯ ಅವರ ಪತ್ನಿಗೆ ಕೇಸ್ ಬಂದಾಗಲೂ ನೋವು ಅನುಭವಿಸಿದ್ದೆ. ನಮ್ಮಲ್ಲಿ ಹೆಣ್ಣನ್ನು ತಾಯಿಯ ಸ್ಥಾನದಲ್ಲಿ ಕಾಣಲಾಗುತ್ತದೆ. ಸಿಎಂ ಸ್ಥಾನದಲ್ಲಿದ್ದು ಇಂತಹ ಪದಗಳನ್ನು ಬಳಸುವುದು ಅಶೋಭನೀಯ. ನಿರ್ಮಲಾ ಸೀತಾರಾಮನ್ ಅವರಿಗೆ ತಕ್ಷಣ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಸಿಎಂ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಾಗೇ, ಹಿಂದಿನ ದಿನಗಳಲ್ಲಿ ಭಗವದ್ಗೀತೆ ಕುರಿತು ಮಾತನಾಡಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಉಲ್ಲೇಖಿಸಿ, ಅವರ ಹಿಂದಿನ ಹೇಳಿಕೆ ಹುಚ್ಚುತನವಾಗಿತ್ತು ಈಗ ಆ ಹುಚ್ಚು ಬಿಟ್ಟಿದೆ ಎಂದು ಟೀಕಿಸಿದರು. ದ್ವೇಷ ಭಾಷಣ ಮಸೂದೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, “ಈ ಮಸೂದೆ ಜಾರಿಯಾದರೆ ಮೊದಲನೇಯದಾಗಿ ಮುಖ್ಯಮಂತ್ರಿಯೇ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author