ಕೇಂದ್ರ ಸರ್ಕಾರಕ್ಕೆ ಉಗ್ರಪ್ಪ ಲಾಸ್ಟ್‌ ವಾರ್ನ್‌

ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿ ಮೀಸಲಾತಿ ಪ್ರಮಾಣವನ್ನು, ಶೇಕಡ 56ಕ್ಕೆ ಏರಿಸಿರುವ ಕಾಯ್ದೆಯನ್ನು, ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು, ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಉಗ್ರಪ್ಪ ಮಾತನಾಡಿದ್ರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜ್ಯದ ಸರ್ವಪಕ್ಷಗಳ ನಿಯೋಗವನ್ನು, ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ತೆಗೆದುಕೊಂಡು ಹೋಗಬೇಕು.

ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿ ಮೀಸಲಾತಿ ಕಾಯ್ದೆ2022 ಕಾಯ್ದೆಯನ್ನು, ಸಂವಿಧಾನದ ಅನುಚ್ಛೇದ 9ಕ್ಕೆ ಸೇರಿಸಬೇಕು ಮತ್ತು ಇಂದಿರಾ ಸಹಾನಿ ಮತ್ತು ಇತರ ಕೇಸ್‌ಗಳಲ್ಲಿ ಮೀಸಲಾತಿ ಪ್ರಮಾಣ ಶೇಕಡ 50ರಷ್ಟನ್ನು ಮೀರಬಾರದು ಎಂದು, ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ತಟಸ್ಥಗೊಳಿಸಬೇಕು. ಇದಕ್ಕಾಗಿ ಸಂವಿಧಾನ ಅನುಚ್ಛೇದ 15 ಮತ್ತು 16ಕ್ಕೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದ್ರು.

ದೇಶದ ರಾಜಕೀಯವಾಗಿ ಜನಸಂಖ್ಯೆ ಆಧಾರಿತ ಮೀಸಲಾತಿಯಿದೆ. ಆದರೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಸೂಕ್ತ ಮೀಸಲಾತಿ ಇಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ತಮಗೆ ನ್ಯಾಯೋಚಿತವಾಗಿ ಲಭಿಸಬೇಕಿದ್ದ ಸಂವಿಧಾನದಿಂದ ವಂಚಿತವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗಳಿಗೆ ಶೇಕಡ 17 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇಕಡ 7 ಮೀಸಲಾತಿ ನೀಡಿದ್ದ 2002ರ ಕಾಯ್ದೆಗೆ ನ್ಯಾಯಾಲಯ ತಡೆ ನೀಡಿದೆ. ಈ ಸಮುದಾಯಗಳಿಗೆ ಈ ಹಿಂದಿನಂತೆ ಕ್ರಮವಾಗಿ ಶೇಕಡ 15 ಮತ್ತು ಶೇಕಡ 3ರಷ್ಟು ಮಾತ್ರ ಮೀಸಲಾತಿ ಸಿಗುತ್ತಿದೆ. ಈ ಸಮುದಾಯದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ರು.

ಹಾಗೆಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರದ ಕೆಲವರು ಸುಳ್ಳು ಪ್ರಮಾಣ ಪತ್ರಗಳನ್ನು ತೆಗೆದುಕೊಂಡು, ಈ ವರ್ಗಗಳ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸುಳ್ಳು ಪ್ರಮಾಣ ಪತ್ರ ಪಡೆದುಕೊಂಡಿರುವ, ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಮತ್ತು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿ.ಎಸ್‌. ಉಗ್ರಪ್ಪ ಒತ್ತಾಯಿಸಿದರು.

About The Author