ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಬಂಪರ್ ಆರ್ಥಿಕ ಉಡುಗೊರೆ ಘೋಷಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಶುದ್ಧ ಇಂಧನ ಮತ್ತು ಸುಸ್ಥಿರ ಚಲನಶೀಲತೆಯತ್ತ ಮುಂದಾಗುತ್ತಿದೆ. ಈ ಸಂದರ್ಭ ಕೇಂದ್ರ ಹಣಕಾಸು ಸಚಿವಾಲಯವು ದೇಶದ ಎಲ್ಲಾ 28 ರಾಜ್ಯಗಳಿಗೆ ಒಟ್ಟಾರೆ ₹1,01,603 ಕೋಟಿ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಮೊತ್ತದ ಅಡಿಯಲ್ಲಿ ಕರ್ನಾಟಕ ರಾಜ್ಯಕ್ಕೆ ₹3,705 ಕೋಟಿ ಹೆಚ್ಚುವರಿ ತೆರಿಗೆ ಪಾಲು ನಿಗದಿಯಾಗಿದೆ. ಇದು ದಸರಾ-ದೀಪಾವಳಿ ಹಬ್ಬದ ಸಂದರ್ಭದಲ್ಲಿನ ಪ್ರಧಾನಿ ಮೋದಿಯವರ ವಿಶಿಷ್ಟ ಉಡುಗೊರೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ. ಅಕ್ಟೋಬರ್ 10ರಂದು ಬಿಡುಗಡೆಯಾಗಬೇಕಿದ್ದ ಸಾಮಾನ್ಯ ಮಾಸಿಕ ಹಂಚಿಕೆಯ ಜೊತೆಗೆ ಈ ಹೆಚ್ಚುವರಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಇದರ ಪ್ರಯೋಜನದಿಂದ ರಾಜ್ಯಗಳು ತಮ್ಮ ಬಂಡವಾಳ ವೆಚ್ಚ, ಅಭಿವೃದ್ಧಿ ಕಾಮಗಾರಿ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಉತ್ತೇಜನ ನೀಡಲು ನೆರವಾಗಲಿದೆ.
ರಾಜ್ಯದ ಹಲವೆಡೆ, ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ, ಅತಿವೃಷ್ಟಿಯಿಂದಾಗಿ ಬೆಳೆಹಾನಿ ಸಂಭವಿಸಿದೆ. ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯ ರೂಪದಲ್ಲಿ ರೈತರಿಗೆ ನೇರ ಆರ್ಥಿಕ ನೆರವು ನೀಡಿದೆ. ರಾಜ್ಯ ಸರ್ಕಾರ ಅನ್ನದಾತರಿಗೆ ಇದನ್ನು ಸಮರ್ಪಕವಾಗಿ ತಲುಪಿಸಲಿ ಎಂದು ಜೋಶಿ ಒತ್ತಾಯಿಸಿದ್ದಾರೆ.
ಮುಂಬರುವ ಹಿಂಗಾರು ಹಂಗಾಮಿನ ಮಾರುಕಟ್ಟೆಯಲ್ಲಿ ಖರೀದಿಸುವ ಗೋಧಿ, ಕುಸುಬೆ, ಬಾರ್ಲಿ, ಮಸೂರ್, ಸಾಸಿವೆ, ಕಡಲೆ ಹೀಗೆ ವಿವಿಧ ಧಾನ್ಯಗಳಿಗೆ ಕೇಂದ್ರ ಸರ್ಕಾರ ಈ ಬಾರಿ ಅತಿ ಹೆಚ್ಚಿನ ಬೆಂಬಲ ಬೆಲೆಯನ್ನು ಘೋಷಿಸಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಇದರ ಲಾಭವನ್ನು ಸಮರ್ಪಕವಾಗಿ ಒದಗಿಸುವ ಕೆಲಸ ಮಾಡಲಿ ಎಂದು ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ




