ಟಾಲಿವುಡ್ ಮೆಗಾ ಫ್ಯಾಮಿಲಿಯಲ್ಲಿ ಈಗ ಸಂಭ್ರಮದ ವಾತಾವರಣ. ಮನೆಯಲ್ಲಿ ನಿರಂತರವಾಗಿ ಸಂತಸದ ಕ್ಷಣಗಳು ಅರಳುತ್ತಿದ್ದು, ಹಬ್ಬದ ಸಡಗರ ಮೂಡಿದೆ. ತೆಲುಗು ಚಿತ್ರರಂಗದ ಜನಪ್ರಿಯ ಸ್ಟಾರ್ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ದಂಪತಿ ತಮ್ಮ ಮೊದಲ ಮಗುವಿಗೆ ಪೋಷಕರಾಗಿದ್ದಾರೆ. ಸೆಪ್ಟೆಂಬರ್ 10ರಂದು ಹೈದರಾಬಾದ್‌ನ ರೈಂಬೋ ಆಸ್ಪತ್ರೆಯಲ್ಲಿ ಲಾವಣ್ಯ ತ್ರಿಪಾಠಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗ ವರುಣ್ ತೇಜ್ ಈಗ ತಂದೆಯಾಗಿದ್ದಾರೆ. ವರುಣ್–ಲಾವಣ್ಯ ದಂಪತಿಗೆ ಮಗುವು ಜನಿಸಿರುವುದರಿಂದ ಇಡೀ ಮೆಗಾ ಕುಟುಂಬದಲ್ಲಿ ಖುಷಿ ಇನ್ನಷ್ಟು ಹೆಚ್ಚಾಗಿದೆ. ಈ ಸುದ್ದಿ ತಿಳಿದ ಕೂಡಲೇ ಚಿರಂಜೀವಿ ತಮ್ಮ ಸಿನಿಮಾದ ಶೂಟಿಂಗ್ ನಿಲ್ಲಿಸಿ ನೇರವಾಗಿ ಆಸ್ಪತ್ರೆಗೆ ತೆರಳಿ ಮೊಮ್ಮಗನನ್ನು ನೋಡಿದ್ದಾರೆ.
ಪ್ರಸ್ತುತ ಚಿರಂಜೀವಿ ಅನಿಲ್ ರಾವಿಪುಡಿ ನಿರ್ದೇಶನದ ಮನ ಶಂಕರವರಪ್ರಸಾದಗಾರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೆಟ್‌ನಲ್ಲಿದ್ದಾಗಲೇ ಸಂತಸದ ಸುದ್ದಿ ತಿಳಿದು, ಶೂಟಿಂಗ್ ಮಧ್ಯೆ ಬಿಟ್ಟು ಆಸ್ಪತ್ರೆಗೆ ತೆರಳಿ ಮೊಮ್ಮಗನನ್ನು ಎತ್ತಿಕೊಂಡು ತಮ್ಮ ಹರ್ಷವನ್ನು ಹಂಚಿಕೊಂಡಿದ್ದಾರೆ. ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿಗೆ ಶುಭಾಶಯಗಳನ್ನೂ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಲಾವಣ್ಯ ಮಗು ಜೊತೆ ಇದ್ದರೆ, ನಾಗಬಾಬು ಮತ್ತು ಅವರ ಪತ್ನಿ ಪದ್ಮಜಲು ಅಜ್ಜ–ಅಜ್ಜಿ ಆಗಿರುವ ಸಂತೋಷದಲ್ಲಿದ್ದರು. ಅವರ ಮಗಳು ನಿಹಾರಿಕಾ ಸಹ ಅಲ್ಲಿದ್ದರು. ಮೊಮ್ಮಗನನ್ನು ನೋಡಿದ ನಾಗಬಾಬು ದಂಪತಿಯ ಸಂತೋಷ ಹೇಳತೀರದಂತಿತ್ತು.ಈ ನಡುವೆ, ಚಿರಂಜೀವಿ ಮೊಮ್ಮಗನನ್ನು ಎತ್ತಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಎಲ್ಲೆಡೆ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

