ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು, ಸರ್ಕಾರಕ್ಕೆ ನೈತಿಕತೆ ಇದ್ದರೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತಕ್ಷಣವೇ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವ ಕುರಿತು ಪ್ರಿಯಾಂಕ್ ಖರ್ಗೆ ಅವರು ಸಿಎಂಗೆ ಬರೆದಿರುವ ಪತ್ರದ ಬಗ್ಗೆ ಇಂದು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಂತಹ ಘೋರ ಕಾರ್ಯ ಮಾಡಿದ ಪ್ರಿಯಾಂಕ್ ಖರ್ಗೆಯನ್ನು ಸಿಎಂ ಸಿದ್ದರಾಮಯ್ಯ ತಕ್ಷಣ ವಜಾ ಮಾಡಬೇಕಾಗಿತ್ತು ಎಂದರು.
ಪ್ರಿಯಾಂಕ್ ಖರ್ಗೆ ಯಾವಾಗಲೂ ಅಪ್ರಸ್ತುತ ಹೇಳಿಕೆ ನೀಡಿ ಸುದ್ದಿಯಲ್ಲಿರೋ ಮಂತ್ರಿ. ಅವರಿಗೆ ಪ್ರಚಾರದಲ್ಲಿರೋ ಆಸೆ ಮಾತ್ರ, ವಿಷಯದ ಅರ್ಥವೇ ಇಲ್ಲದೆ ಮಾತನಾಡುತ್ತಾರೆ. ದುರುದ್ದೇಶದಿಂದ ಈ ಪತ್ರ ಬರೆದಿದ್ದಾರೆ. ಇವರು ಮಲ್ಲಿಕಾರ್ಜುನ ಖರ್ಗೆಯ ಮಗ ಎನ್ನುವುದು ಹೊರತು ಬೇರೆ ಯಾವುದೇ ಅರ್ಹತೆ ಇಲ್ಲ. ಜ್ಞಾನ ಇಲ್ಲದೆ ಅಧಿಕಾರ ಕುರ್ಚಿಯಲ್ಲಿ ಕುಳಿತಿದ್ದಾರೆ. ವಂಶಪಾರಂಪರ್ಯದಿಂದ ಬಂದ ಅಧಿಕಾರಕ್ಕೆ ಜನರ ವಿಶ್ವಾಸ ಸಿಗುವುದಿಲ್ಲ. ತಮ್ಮ ಸಾಧನೆ ಮತ್ತು ಕೆಲಸಗಳ ಮೂಲಕ ಮಾತನಾಡಲಿ ಎಂದು ಅಶ್ವಥ್ ನಾರಾಯಣ್ ಟೀಕಿಸಿದರು.
ಸಮಾಜ ಒಡೆಯುವ ಕೆಲಸ ಮಾಡಬೇಡಿ, ಬದಲಾಗಿ ಬಾಂಧವ್ಯ ಮತ್ತು ಗೌರವವನ್ನು ಬೆಳೆಸಬೇಕು. ನಿಮ್ಮ ಕೀಳು ಆಲೋಚನೆಗೆ ಜನ ನಗುತ್ತಿದ್ದಾರೆ. ನೀವು ಬರೆದಿರುವ ಪತ್ರವನ್ನು ಹಿಂಪಡೆದು ಕ್ಷಮೆಯಾಚಿಸಿದರೆ ತಪ್ಪಿಗೆ ಪಶ್ಚಾತ್ತಾಪ ಪಡುವ ಅವಕಾಶ ಸಿಗುತ್ತದೆ. ಶತಮಾನೋತ್ಸವ ಆಚರಿಸಿಕೊಂಡಿರುವ ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೇಳುವುದು ಸರಿಯಲ್ಲ. ಸಿದ್ದರಾಮಯ್ಯನವರೇ, ನಿಮ್ಮ ಆತ್ಮಸಾಕ್ಷಿ ಇದನ್ನು ಒಪ್ಪುತ್ತದೆಯಾ? ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಸ್ ದಾಖಲಾಗಬೇಕು ಎಂದು ಅವರು ಹೇಳಿದರು.
ಸಂಪುಟ ಪುನರ್‌ರಚನೆ ಕುರಿತು ಹೈಕಮಾಂಡ್ ತೀರ್ಮಾನಿಸುತ್ತೆ ಎಂಬ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಒಳಕಾಳಗ ಎಲ್ಲರಿಗೂ ಗೊತ್ತಿದೆ. ಮೊದಲ ದಿನದಿಂದಲೇ ಪರಮೇಶ್ವರ್ ಮತ್ತು ಸಿದ್ಧರಾಮಯ್ಯನವರ ನಡುವೆ ಕದನ ಇದೆ. ಪರಮೇಶ್ವರ್ ಸಿಎಂ ಆಗುವ ಬಯಕೆಯೂ ವ್ಯಕ್ತವಾಗಿದೆ. ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯೇ ಮ್ಯೂಸಿಕಲ್ ಚೇರ್ ಆಗಿದೆ, ಯಾರು ಎತ್ತಿಕೊಂಡು ಹೋಗ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ