ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿ ಇರುವ ಎರಡು ಸಚಿವ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದೆ. ಈ ಎರಡೂ ಸ್ಥಾನಗಳನ್ನು ವಾಲ್ಮೀಕಿ ಸಮುದಾಯದ ಪ್ರತಿನಿಧಿಗಳಿಗೆ ನೀಡಬೇಕೆಂದು, ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ಈ ಬಗ್ಗೆ ವಾಲ್ಮೀಕಿ ಸಮುದಾಯದ ಮಠಾಧೀಶ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಈ ಹಿಂದೆಯೂ ಇದೇ ರೀತಿಯ ವಿನಂತಿಯನ್ನು ಮಾಡಿದ್ದೆವು. ಬೆಂಗಳೂರಿನಲ್ಲಿ ನಡೆಯಲಿರುವ ವಾಲ್ಮೀಕಿ ಜಯಂತಿ ಆಚರಣೆ ಸಂದರ್ಭದಲ್ಲಿ, ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ನಾವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದೆಯೂ, ನಮ್ಮ ಮನವಿಯನ್ನು ಮಂಡಿಸುತ್ತೇವೆಂದು ಹೇಳಿದ್ರು.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಅನುದಾನ ನೀಡಿದ ಮಾದರಿಯಲ್ಲೇ, ಕಿತ್ತೂರು ಕರ್ನಾಟಕ ಭಾಗಕ್ಕೂ ಪ್ರತ್ಯೇಕ ಅನುದಾನ ನೀಡುವುದು ಅಗತ್ಯವಿದೆ. ಈ ಬಗ್ಗೆಯೂ ಮನವಿ ಮಾಡಿದ್ದೇವೆ. ಇದಕ್ಕಾಗಿ ಕಿತ್ತೂರು ಕರ್ನಾಟಕದ 34 ಶಾಸಕರು, ಸಚಿವರ ನಿಯೋಗ ಕೊಂಡೊಯ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು. ಕಿತ್ತೂರು ಕರ್ನಾಟಕ ಭಾಗವು ಬಹಳಷ್ಟು ಹಿಂದುಳಿದ ಪ್ರದೇಶವಾಗಿದೆ. ಇಲ್ಲಿಯೂ ಅಭಿವೃದ್ಧಿಗೆ ಹಣಕಾಸಿನ ಅಗತ್ಯವಿದೆ. ಹಾಗಾಗಿ ಎಲ್ಲ ಜನಪ್ರತಿನಿಧಿಗಳು ಕುಳಿತು ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಅಂತಾ, ಸತೀಶ್ ಜಾರಕಿಹೊಳಿ
ಹೇಳಿದ್ದಾರೆ.