ನ್ಯಾಷನಲ್ ಡೆಸ್ಕ್ ಕರ್ನಾಟಕ ಟಿವಿ : ಮಧ್ಯಪ್ರಾಚ್ಯ ದೇಶಗಳಾದ ಇರಾನ್-ಇಸ್ರೇಲ್ ನಡುವಿನ ಸಂಘರ್ಷ ವಿಶ್ವವನ್ನೇ ಗಢ ಗಢ ನಡುಗುವಂತೆ ಮಾಡಿದೆ. ಮುಸ್ಲಿಂ ರಾಷ್ಟ್ರಗಳ ಎಂಟ್ರಿಯಿಂದಾಗಿ ಯುದ್ಧದ ತೀವ್ರತೆ ಭೀಕರ ಸ್ವರೂಪ ತಳೆಯುತ್ತಿದೆ. ಇರಾನ್ – ಇಸ್ರೇಲ್ ನಡುವಿನ ಯುದ್ಧ ವಿಶ್ವದ ಹಲವು ರಾಷ್ಟ್ರಗಳ ಮೇಲೆ ನೇರ ಪರಿಣಾಮ ಬೀರಿದೆ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುವ ಸಾಧ್ಯತೆ ದಟ್ಟವಾಗಿದೆ.
ವಿಶ್ವದಲ್ಲಿ ತೈಲ ಬೆಲೆ ಹೆಚ್ಚಳ
ಪ್ರತಿ ಬ್ಯಾರೆಲ್ಗೆ 85 ಡಾಲರ್!
ಇರಾನ್ನ ತೈಲ ಘಟಕಗಳು, ರಕ್ಷಣಾ ನೆಲಗಳು, ಶ್ರೀಮಂತ ನಗರಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿದೆ. ಈ ಎರಡೂ ದೇಶಗಳ ನಡುವಿನ ಸಮರ, ವಿಶ್ವದ ಬಹುತೇಕ ರಾಷ್ಟ್ರಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಪರ್ಷಿಯನ್ ಕೊಲ್ಲಿಯಲ್ಲಿರುವ ಹೊರ್ಮುಜ್ ಜಲಸಂಧಿ ಹಾಗೂ ಕೆಂಪು ಸಮುದ್ರದ ಮೂಲಕವೇ ಸರಕು ಸಾಗಾಣೆ, ತೈಲ ರಫ್ತು ಮಾಡಲಾಗುತ್ತದೆ. ತೈಲ ಪೂರೈಕೆ ನಿಂತರೆ, ಬೆಲೆ ನಿಯಂತ್ರಣ ತಪ್ಪುತ್ತದೆ.
ಇಲ್ಲಿ ಹಡಗು ಸಂಚಾರಕ್ಕೆ ಇರಾನ್ ತಡೆಯೊಡ್ಡಿದರೇ, ಭಾರತ, ಚೀನಾ ಸೇರಿದಂತೆ ಏಷ್ಯಾದ ರಾಷ್ಟ್ರಗಳಿಗೆ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಇಸ್ರೇಲ್ ಮೇಲೆ ಇರಾನ್ ಸೇಡು ತೀರಿಸಿಕೊಳ್ಳಲು ಮುಂದಾದರೆ ಪರಿಣಾಮ ತೀರಾ ಕೆಟ್ಟದಾಗಿರುತ್ತದೆ.
ಹೊರ್ಮುಜ್ ಜಲಸಂಧಿ ಮೇಲೆ ಇರಾನ್ ನೇರನಿಯಂತ್ರಣ ಹೊಂದಿದೆ. ಕೆಂಪು ಸಮುದ್ರದ ನೌಕಾ ಮಾರ್ಗದ ಮೇಲೆ ನೇರ ನಿಯಂತ್ರಣ ಇಲ್ಲದಿದ್ದರೂ ಯೆಮನ್ನಲ್ಲಿ ಕಾರ್ಯಾಚರಿಸುತ್ತಿರುವ ಹುಥಿ ಬಂಡುಕೋರರ ಮೂಲಕ ಜಲ ಮಾರ್ಗವನ್ನು ತಡೆಯಬಹುದಾಗಿದೆ.
ಸದ್ಯ, ಹೊರ್ಮುಜ್ ಜಲಸಂಧಿ ಮೂಲಕವೇ 5ನೇ 1 ಭಾಗದಷ್ಟು ಕಚ್ಚಾತೈಲ ಸಾಗಾಣೆ ನಡೆಯುತ್ತಿದೆ. ಭಾರತವೂ ತನ್ನ ಬಳಕೆಯ ಅತೀ ಹೆಚ್ಚಿನ ಇಂಧನವನ್ನು ಈ ಮಾರ್ಗದಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ಕಚ್ಚಾತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲವು ಈ ಮಾರ್ಗದ ಮೂಲಕವೇ ಬರುತ್ತದೆ. ಯಾವುದೇ ಕಾರಣವಿರಲಿ, ಈ ಜಲಸಂಧಿಯಲ್ಲಿ ಹಡಗುಗಳ ಸಂಚಾರ ನಿರ್ಬಂಧವಾದರೆ ಭಾರತಕ್ಕೆ ಸರಕು ಸಾಗಾಣೆ ವೆಚ್ಚ ಹೆಚ್ಚಾಗುತ್ತದೆ. ಸರಕುಗಳ ಬೆಲೆ ಹೆಚ್ಚಾಗಿ ಹಣದುಬ್ಬರ ಉಂಟಾಗುತ್ತದೆ. ರೂಪಾಯಿ ಮೌಲ್ಯ ಕುಸಿಯುತ್ತದೆ. ದೇಶದ ಹಣಕಾಸು ನಿರ್ವಹಣೆ ಕಷ್ಟವಾಗುತ್ತದೆ. ಷೇರು ಮಾರುಕಟ್ಟೆಯಲ್ಲೂ ಇಳಿಕೆಗೂ ಕಾರಣವಾಗುತ್ತದೆ. ಮತ್ತು ಜಾಗತಿಕ ಮಟ್ಟದಲ್ಲಿ ದೀರ್ಘಕಾಲದ ಅನಿಶ್ಚಿತತೆ ಉಂಟಾಗಬಹುದೆಂದು ಹೇಳಲಾಗ್ತಿದೆ.
ಪ್ರತಿ ದಿನ 1.8 ಕೋಟಿಯಿಂದ 1.9 ಕೋಟಿ ಬ್ಯಾರೆಲ್ನಷ್ಟು ತೈಲ ಹಡಗುಗಳ ಮೂಲಕ ಸಾಗಿಸಲ್ಪಡುತ್ತದೆ. ರಷ್ಯಾ ಭಾರತದ ಅತೀ ದೊಡ್ಡ ತೈಲ ಪೂರೈಕೆದಾರನಾಗಿದೆ. ನಂತರ ಇರಾಕ್, ಸೌದಿ ಅರೇಬಿಯಾದಿಂದ ತೈಲ ಪೂರೈಕೆ ಮಾಡಿಕೊಳ್ಳುತ್ತದೆ. ಭಾರತವು ಶೇಕಡ 80ರಷ್ಟು ಕಚ್ಚಾತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ 3ನೇ 2 ಭಾಗದಷ್ಟು ತೈಲ ಈ ಮಾರ್ಗದ ಮೂಲಕವೇ ಭಾರತ ತಲುಪುತ್ತದೆ. ಮುಖ್ಯವಾಗಿ ಇರಾಕ್, ಸೌದಿ, ಅರೇಬಿಯಾ, ಯುಎಇಗಳಿಂದ ಈ ಜಲಸಂಧಿಯ ಮೂಲಕವೇ ತೈಲ ಸಾಗಿಸಲಾಗುತ್ತದೆ.
ಭಾರತ-ಇಸ್ರೇಲ್
2023-24
ರಫ್ತು – 38,682 ಕೋಟಿ
ಆಮದು – 17,192 ಕೋಟಿ
2024-25
ರಫ್ತು – 18,052 ಕೋಟಿ
ಆಮದು – 13,754 ಕೋಟಿ
ಭಾರತ-ಇರಾನ್
2023-24
ರಫ್ತು – 12,034 ಕೋಟಿ
ಆಮದು – 5,373 ಕೋಟಿ
2024-25
ರಫ್ತು – 12,034 ಕೋಟಿ
ಆಮದು – 3,791 ಕೋಟಿ
2023-24ರಲ್ಲಿ ಭಾರತ-ಇಸ್ರೇಲ್ ನಡುವೆ 38,682 ಕೋಟಿ ರಫ್ತು, 17,192 ಕೋಟಿ ಮೌಲ್ಯದಷ್ಟು ಆಮದು ಮಾಡಿಕೊಳ್ಳಲಾಗಿತ್ತು. 2024-25ರಲ್ಲಿ 18,052 ಕೋಟಿಯಷ್ಟು ರಫ್ತು, 13,754 ಕೋಟಿಯಷ್ಟು ಆಮದು ಮಾಡಿಕೊಳ್ಳಲಾಗಿದೆ. ಇನ್ನು, ಭಾರತ-ಇರಾನ್ ನಡುವೆ 2023-24ರಲ್ಲಿ 12,034 ಕೋಟಿ ರಫ್ತು, 5,373 ಕೋಟಿ ಮೌಲ್ಯದ ಆಮದಾಗಿದೆ. 2024-25ರಲ್ಲಿ 12,034 ಕೋಟಿಯ ರಫ್ತು, 3,791 ಕೋಟಿಯ ಆಮದು ಮಾಡಿಕೊಳ್ಳಲಾಗಿದೆ. ಭಾರತದ ಒಟ್ಟಾರೆ ಶೇಕಡ 34ರಷ್ಟು ರಫ್ತುಗಳು ಹೊರ್ಮುಜ್ ಜಲಸಂಧಿ ಮೂಲಕವೇ ನಡೆಯುತ್ತಿದೆ.
ಜಾಗತಿಕ ಮಟ್ಟದ ಶೇಕಡ. 12ರಷ್ಟು ವ್ಯಾಪಾರ ಈ ಮಾರ್ಗದಲ್ಲೇ ನಡೆಯುತ್ತದೆ. ಯೂರೋಪ್, ಉತ್ತರ ಆಫ್ರಿಕಾ, ಅಮೇರಿಕಾ ಸೇರಿ ಪಶ್ಚಿಮ ರಾಷ್ಟ್ರಗಳಿಗೆ ಭಾರತ ಮಾಡುವ ಶೇಕಡ 30ರಷ್ಟು ರಪ್ತು ಈ ಮಾರ್ಗವನ್ನೇ ಅವಲಂಬಿಸಿದೆ. ಯೂರೋಪಿನೊಂದಿಗೆ ಮಾಡುತ್ತಿರುವ ವಾಣಿಜ್ಯ ಸರಕು ವ್ಯಾಪಾರದಲ್ಲಿ ಶೇಕಡ 80ರಷ್ಟು ವ್ಯಾಪಾರ ಕೆಂಪು ಸಮುದ್ರದ ಮಾರ್ಗವಾಗಿ ನಡೆಯುತ್ತದೆ. ಹೊರ್ಮುಜ್ ಜಲಸಂಧಿಯಲ್ಲಿ ಯಾವುದೇ ಅಡಚಣೆ ಉಂಟಾದರೂ ಇರಾಕ್, ಸೌದಿ ಅರೇಬಿಯಾ ಮತ್ತು ಯುಎಇಗಳಿಂದ ತೈಲ ರಫ್ತಿಗೆ ತೊಂದರೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಅಮೆರಿಕಾ ನಿರ್ಬಂಧ ಹೇರುವ ಮುನ್ನ ಭಾರತದ 3ನೇ ಅತೀ ದೊಡ್ಡ ತೈಲ ಪೂರೈಕೆಯನ್ನು ಇರಾನ್ ಮಾಡುತ್ತಿತ್ತು. ಇನ್ನು, ಇರಾನ್ಗೆ ಬಾಸುಮತಿ ಅಕ್ಕಿ, ಚಹಾ ಪುಡಿ, ಸಕ್ಕರೆ, ಹಣ್ಣು, ಔಷಧಿ, ಪಾನೀಯ, ಕಾಳು, ಬೀಜ ರಫ್ತುಮಾಡಿದರೆ, ಭಾರತವು ಸ್ಯಾಚುರೇಟೆಡ್ ಮಿಥೆನಾಲ್, ಪೆಟ್ರೋಲಿಯಂ ಉತ್ಪನ್ನಗಳು, ಸೇಬು, ಒಣಕರ್ಜೂರ, ಬಾದಾಮಿ, ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುತ್ತಿದೆ.
2025ರಲ್ಲಿ ಭಾರತ 5.7 ಮಿಲಿಯನ್ ಬ್ಯಾರಲ್ಗಳಷ್ಟು ಕಚ್ಚಾ ತೈಲವನ್ನು ಪ್ರತಿದಿನ, 24 ಮಿಲಿಯನ್ ಟನ್ಗಳಷ್ಟು ಎಲ್ಪಿಜಿ, 36 ಬಿಲಿಯನ್ ಕ್ಯೂಬಿಕ್ ಮೀಟರ್ಗಳಿಗೂ ಹೆಚ್ಚು ಎಲ್ಎನ್ಜಿ ಆಮದು ಮಾಡಲಿದೆ. 2024-25ರ ಆರ್ಥಿಕ ವರ್ಷದಲ್ಲಿ, ಭಾರತ 137 ಬಿಲಿಯನ್ ಡಾಲರ್ ಮೊತ್ತವನ್ನು ಕಚ್ಚಾ ತೈಲ ಆಮದಿಗೆ, ಮತ್ತು 36 ಬಿಲಿಯನ್ ಡಾಲರ್ ಮೊತ್ತವನ್ನು ಎಲ್ಎನ್ಜಿ ಮತ್ತು ಎಲ್ಪಿಜಿ ಆಮದಿಗೆ ವೆಚ್ಚ ಮಾಡಿದೆ. ಆಗ ಕಚ್ಚಾ ತೈಲದ ಸರಾಸರಿ ದರ ಪ್ರತಿ ಬ್ಯಾರಲ್ಗೆ 81 ಡಾಲರ್ ಆಗಿತ್ತು. ಆದರೆ, ಪ್ರತಿ ಬ್ಯಾರಲ್ ದರ 85 ಡಾಲರ್ಗೂ ಹೆಚ್ಚಾಗತೊಡಗಿದೆ.
ಇನ್ನು, ಇಸ್ರೇಲಿನಿಂದ ಅಡುಗೆ ಸಾಮಗ್ರಿಗಳ ಜೊತೆಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಇಸ್ರೇಲ್ ಅನಿಲ ಉತ್ಪಾದನೆ ನಿಲ್ಲಿಸಿದರೆ ಇಂಧನ ಕೊರತೆ ಉಂಟಾಬಹುದು. ಇಸ್ರೇಲ್ – ಇರಾನ್ ಉದ್ವಿಗ್ನತೆಯ ಪರಿಣಾಮ, ತೈಲ ದರ ಶೇಕಡಾ 20ರಷ್ಟು ಏರಿಕೆ ಕಂಡಿದ್ದು, ಪ್ರತೀ ಬ್ಯಾರಲ್ಗೆ 74 ಡಾಲರ್ ಆಗಿದೆ. ಒಂದು ವೇಳೆ ತೈಲ ದರಗಳು 2025ರ ಇಡೀ ವರ್ಷ 80 ಡಾಲರ್ಗಿಂತ ಮೇಲೇ ಇದ್ದರೆ, ಆಮದು ವೆಚ್ಚ ಬಹಳಷ್ಟು ಹೆಚ್ಚಲಿದೆ. ಜೊತೆಗೆ ಏಷ್ಯಾದಲ್ಲಿ 1 ಪ್ರತಿಶತದಷ್ಟು ಕಚ್ಚಾ ತೈಲ ಬ್ಯಾರೆಲ್ ಬೆಲೆ ಹೆಚ್ಚಳವಾಗಿದೆ. ಪ್ರತಿ ಬ್ಯಾರೆಲ್ಗೆ 75 ಡಾಲರ್ ಮೊತ್ತ ತಲುಪಿದೆ. ಇದರಿಂದ ಸಹಜವಾಗಿಯೇ ವಿಶ್ವದಾದ್ಯಂತ ತೈಲೆ ಬೆಲೆ ಏರಿಕೆಯಾಗ್ತಿದೆ.
ಸಂಘರ್ಷದ ಪರಿಣಾಮ ಇಸ್ರೇಲ್, ಇರಾನ್ ತಮ್ಮ ವಾಯುಪ್ರದೇಶಗಳನ್ನು ನಿರ್ಬಂಧಿಸಿವೆ. ಇದರಿಂದಾಗಿ ಜಾಗತಿಯ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಭಾರತದಲ್ಲಿಯೂ ಕೆಲವು ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಕೆಲವು ವಿಮಾನಗಳನ್ನು ರದ್ದು ಪಡಿಸಲಾಗಿದೆ.