ಬೆಂಗಳೂರು : ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಬೆನ್ನೆಲ್ಲೇ ರಾಜ್ಯದ ಪ್ರಭಾವಿ ಸಚಿವರಿಗೆ ಇಡಿ ಶಾಕ್ ನೀಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಬೆಳಂಬೆಳಿಗ್ಗೆ ಜಾರಿ ನಿರ್ದೇಶನಾಯಲದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ತುಮಕೂರಿನಲ್ಲಿರುವ ಪರಮೇಶ್ವರ್ ಅವರಿಗೆ ಸೇರಿರುವ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಿಗೆ ತೆರಳಿರುವ ಅಧಿಕಾರಿಗಳ ತಂಡ ದಾಖಲೆಗಳನ್ನು ತಲಾಶ್ ನಡೆಸುತ್ತಿದೆ. ಅಲ್ಲದೆ ನೆಲ ಮಂಗಲದ ಟಿ ಬೇಗೂರು ಬಳಿ ಇರುವ ಕಾಲೇಜಿನ ಮೇಲೂ ದಾಳಿ ನಡೆದಿದೆ. ಡಿವೈಎಸ್ಪಿ ನೇತೃತ್ವದಲ್ಲಿ ಕಾಲೇಜಿಗೆ ಭದ್ರತೆ ಒದಗಿಸಲಾಗಿದೆ.
9 ಕಾರುಗಳಲ್ಲಿ ಆಗಮಿಸಿರುವ ಅಧಿಕಾರಿಗಳು..
9 ಕಾರುಗಳಲ್ಲಿ ಆಗಮಿಸಿರುವ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಪ್ರಮುಖವಾಗಿ ನಾಲ್ಕು ವರ್ಷಗಳ ಹಿಂದೆಯೂ ಇದೇ ರೀತಿಯಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಕೋಟ್ಯಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿತ್ತು. ಇದೇ ಆ ವೇಳೆ ಆಧಾರದಲ್ಲಿ ಅಕ್ರಮ ಹಣದ ವರ್ಗಾವಣೆ ಪ್ರಕರಣವೂ ದಾಖಲಾಗಿತ್ತು.
ಬಿಜೆಪಿ ವಿರುದ್ಧ ಆರೋಪಿಸಿದ್ದ ಪರಮೇಶ್ವರ್..
ಅಲ್ಲದೆ ಈ ಹಿಂದೆ ದಾಳಿ ನಡೆದಿದ್ದ ವೇಳೆ ಪರಮೇಶ್ವರ್ ಅವರು ಬಿಜೆಪಿಯ ವಿರುದ್ಧ ನೇರವಾಗಿ ಆರೋಪ ಮಾಡಿದ್ದರು. ಈ ದಾಳಿಯ ಹಿಂದೆ ಬಿಜೆಪಿಯ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ ಈಗ ಸರ್ಕಾರದಲ್ಲಿ ಕಳೆದ ಎರಡು ವರ್ಷಗಳಿಂದ ಮಹತ್ವದ ಗೃಹ ಇಲಾಖೆಯನ್ನು ನಿಭಾಯಿಸುತ್ತಿರುವ ಪರಮೇಶ್ವರ್ ಅವರಿಗೆ ಈ ಬಾರಿ ಇಡಿ ಶಾಕ್ ನೀಡಿದ್ದು, ಮುಂದೆ ಇದು ಯಾವ ರೀತಿಯ ರಾಜಕೀಯ ಸ್ವರೂಪವನ್ನು ಪಡೆಯಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಚಿನ್ನ ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿರುವ ರನ್ಯಾರಾವ್ ಪ್ರಕರಣ ಹಾಗೂ ಇತ್ತೀಚೆಗೆ ಪರಮೇಶ್ವರ ಅವರು ಖರೀದಿಸಿರುವ ಎಚ್‌ಎಂಎಸ್ ಎಂಜಿನಿಯರಿಂಗ್ ಕಾಲೇಜಿಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ನನಗೆ ಮಾಹಿತಿ ಇಲ್ಲ..
ಇಡಿ ದಾಳಿಯ ಬಗ್ಗೆ ನನಗೆ ಗೊತ್ತಿಲ್ಲ, ನನಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.