ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಚುನಾವಣಾ ಆಯೋಗವು ಮೋದಿ ಸರ್ಕಾರದೊಂದಿಗೆ ಶಾಮೀಲಾಗಿ, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಮಾಡಿದೆ. ದೇಶದ 12 ರಾಜ್ಯಗಳಲ್ಲಿ ʻವೋಟ್ ಚೋರಿʼ ನಡೆಸಲು ಸಂಚು ರೂಪಿಸಿದೆ ಎಂದು ವಾಗ್ದಾಳಿ ನಡೆಸಿದೆ.
ಬಿಹಾರದಲ್ಲಿ ಈಗಾಗಲೇ 69 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇನ್ನು ತೀವ್ರ ವಿಶೇಷ ಪರಿಷ್ಕರಣೆ ಹೆಸರಲ್ಲಿ, ಕೋಟ್ಯಾಂತರ ಜನರ ಹೆಸರನ್ನು ತೆಗೆದು ಹಾಕಬಹುದು. ಚುನಾವಣಾ ಆಯೋಗ ವೋಟ್ ಚೋರಿ ಆಟವಾಡಲು ಶುರು ಮಾಡಿಕೊಂಡಿದೆ.
ಕೇಂದ್ರ ಬಿಜೆಪಿ ಸರ್ಕಾರ ಸ್ವತಂತ್ರ್ಯ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು, ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿದೆ. ಪ್ರಜಾಪ್ರಭುತ್ವದ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸುಪ್ರೀಂಕೋರ್ಟ್ ಆದೇಶದ ಮೇಲೆಯೂ ದೇಶಾದ್ಯಂತ ಎಸ್‌ಐಆರ್ ಜಾರಿಗೆ ತರಲು, ಚುನಾವಣಾ ಆಯೋಗಕ್ಕೆ ಇಷ್ಟೊಂದು ಆತುರ ಏಕೆ?. ಬಿಹಾರದಲ್ಲಿ ರಾಜಕೀಯವಾಗಿ ಬಳಸಿಕೊಂಡ ಅಕ್ರಮ ವಲಸಿಗರ ಬಗ್ಗೆ ಚುನಾವಣಾ ಆಯೋಗ, ಯಾವುದೇ ವಿವರಗಳನ್ನು ಏಕೆ ಹಂಚಿಕೊಂಡಿಲ್ಲ?. ಅಸ್ಸಾಂನಲ್ಲಿ ಎಸ್‌ಐಆರ್ ಏಕೆ ಇಲ್ಲ?. ಇದು ಮೋದಿ ಮತ್ತು ಶಾ ಅವರ ಸಂಪೂರ್ಣ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು, ಮೋದಿ ಸರ್ಕಾರದ ಆಡಳಿತದ ಬಗ್ಗೆ ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಟೀಕಿಸಿದ್ದಾರೆ. ಈ ಬೆನ್ನಲ್ಲೇ ತಮಿಳುನಾಡಿನ ಸಿಎಂ ಸ್ಟಾಲಿನ್, ನವೆಂಬರ್2ರಂದು ಈ ಬಗ್ಗೆ ಚರ್ಚಿಸಲು ರಾಜಕೀಯ ನಾಯಕರನ್ನು ಸಭೆಗೆ ಆಹ್ವಾನಿಸಿದ್ದಾರೆ.




