ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಕಾರು ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ದೆಹಲಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಈ ಸ್ಫೋಟಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಮತ್ತು ಸ್ಫೋಟಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ UAPA ಸೆಕ್ಷನ್ 16 ಮತ್ತು 18, ಜೊತೆಗೆ BNS ನ ಸಂಬಂಧಿತ ನಿಬಂಧನೆಗಳಡಿ FIR ದಾಖಲಾಗಿದೆ.
ಆರಂಭಿಕ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿದ್ದು, ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್, ಇಂಧನ ತೈಲ ಹಾಗೂ ಸ್ಫೋಟಕ ಡಿಟೋನೇಟರ್‌ಗಳು ಬಳಸಲಾಗಿದೆ ಎಂಬುದು ತಿಳಿದುಬಂದಿದೆ. ಅಂತಿಮ ದೃಢೀಕರಣಕ್ಕಾಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಿರೀಕ್ಷೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಸ್ಫೋಟವು ಭಯೋತ್ಪಾದಕ ಚಟುವಟಿಕೆ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚಲು NIA, ಬಾಂಬ್ ತಜ್ಞರು ಹಾಗೂ ಇಂಟೆಲಿಜೆನ್ಸ್ ಘಟಕಗಳು ಸ್ಥಳದಲ್ಲಿ ತಪಾಸಣೆ ನಡೆಸಿವೆ.
ಈ ಘಟನೆಯ ನಂತರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಉನ್ನತ ಮಟ್ಟದ ಭದ್ರತೆ ಜಾರಿಗೊಳಿಸಲಾಗಿದೆ. ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಮುಖ ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸಿ ತಾಣಗಳ ಸುತ್ತಮುತ್ತ ಬಿಗಿ ತಪಾಸಣೆ ನಡೆಯುತ್ತಿದೆ.
ಒಟ್ಟು 13 ಮಂದಿ ಸಾವನ್ನಪ್ಪಿದ್ದು, ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಘಟನೆಯ ಪೂರ್ಣ ಹಿನ್ನಲೆ ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ

