ಮಂಗಳವಾರ ರಾತ್ರಿ ಫಿಲಿಪೈನ್ಸ್ನ ಸೆಬು ದ್ವೀಪದಲ್ಲಿ 6.9 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದೆ. ಪ್ರಬಲ ಭೂಕಪಂದಿಂದ ಮೃತಪಟ್ಟವರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 379ಕ್ಕೂ ಅಧಿಕ ಮರುಕಂಪನಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಕಠಿಣ ಪರಿಸ್ಥಿತಿಯಲ್ಲಿ ನಡೆಯುತ್ತಿದೆ.
ಅಮೆರಿಕದ ಭೂಗರ್ಭಶಾಸ್ತ್ರೀಯ ಸಮೀಕ್ಷಾ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದು ಸೆಬು ದ್ವೀಪದ ಬೊಗೊ ನಗರದ ಸಮೀಪ, ಸ್ಥಳೀಯ ಕಾಲಮಾನ ಸಂಜೆ 9:59ಕ್ಕೆ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ. ಫಿಲಿಪೈನ್ಸ್ನ ಸೀಬು ನಗರದಲ್ಲಿ ಇರುವ ಆಸ್ಪತ್ರೆಯ ಹೊರಗೆ ನೀಲಿ ಟೆಂಟ್ಗಳು ಹಾಕಲಾಗಿದೆ.
ಅದರೊಳಗೆ ಮಕ್ಕಳಿಗೆ, ಮಹಿಳೆಯರಿಗೆ, ವಯಸ್ಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನೋವಿನಿಂದ ಮಕ್ಕಳು ಜೋರಾಗಿ ಅಳುತ್ತಿರುವುದು ನೋಡುಗರ ಮನ ಕದಡುತ್ತದೆ. ರಾತ್ರಿ ವೇಳೆ ನಿದ್ದೆಯಲ್ಲಿರುವಾಗ ಭೂಕಂಪ ಸಂಭವಿಸಿದ್ದು ಸಾಕಷ್ಟು ಜನರು ಗಂಭೀರವಾಗಿಯೇ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸೆಬು ಪ್ರಾಂತ್ಯದ ಗವರ್ನರ್ ಪಮೇಲಾ ಬರಿಕ್ವಾತ್ರೊ ಅವರು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಬೊಗೊ ನಗರದಲ್ಲಿಯೇ 25 ಸಾವುಗಳು ಸಂಭವಿಸಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ ಪ್ರಕಾರ, ಭೂಕಂಪದಲ್ಲಿ 147 ಜನರು ಗಾಯಗೊಂಡಿದ್ದು, 22 ಕಟ್ಟಡಗಳಿಗೆ ಹಾನಿಯಾಗಿದೆ. ಬಂಟಾಯನ್ ದ್ವೀಪದ ಐತಿಹಾಸಿಕ ಕ್ಯಾಥೋಲಿಕ್ ಚರ್ಚ್ನ ಗಂಟೆ ಗೋಪುರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಲವೆಡೆ ವಿದ್ಯುತ್ ಸರಬರಾಜು ಪುನರ್ ಸ್ಥಾಪನೆಯಾಗಿದೆ. ಸದ್ಯ ಹೆಚ್ಚಿನ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವರದಿ : ಲಾವಣ್ಯ ಅನಿಗೋಳ