www.karnatakatv.net: ದೀಪಾವಳಿಗೆ ಪಟಾಕಿ ನಿಷೇಧವು ಯಾವುದೇ ಸಮುದಾಯದ ವಿರುದ್ಧ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ, ‘ಸಂಭ್ರಮದ ನೆಪದಲ್ಲಿ ನಾಗರಿಕರ ಹಕ್ಕುಗಳ ಉಲ್ಲಂಘನೆಗೆ ಅನುಮತಿ ನೀಡಲಾಗದು’ ಎಂದು ಇಂದು ಹೇಳಿದೆ.
‘ಸಂಭ್ರಮದ ನೆಪದಲ್ಲಿ ತಯಾರಕರು ನಾಗರಿಕರ ಜೀವನದೊಂದಿಗೆ ಆಟವಾಡಲು ಸಾಧ್ಯವಿಲ್ಲ. ನಾವು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧ ಅಲ್ಲ. ಆದರೆ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವು ಇಲ್ಲಿದ್ದೇವೆ ಎಂಬ ಬಲವಾದ ಸಂದೇಶವನ್ನು ಕಳುಹಿಸಲು ಬಯಸುತ್ತೇವೆ’ ಎಂದು ಪೀಠ ಹೇಳಿತು. ನ್ಯಾಯಮೂರ್ತಿಗಳಾದ ಎಂ.ಆರ್.ಷಾ ಮತ್ತು ಎ.ಎಸ್. ಬೋಪಣ್ಣ ಅವರ ಪೀಠವು, ತನ್ನ ಆದೇಶಗಳು ಸಂಪೂರ್ಣ ಅನುಷ್ಠಾನವಾಗಬೇಕು ಎಂದು ನಿರ್ದೇಶನ ನೀಡಿತು. ಈ ಹಿಂದೆ ಪಟಾಕಿ ನಿಷೇಧ ಆದೇಶಕ್ಕೆ ಸಂಬoಧಿಸಿದoತೆ ವಿಸ್ತೃತ ಕಾರಣಗಳನ್ನು ನೀಡಿದ ಬಳಿಕವೇ ಅದನ್ನು ಅಂಗೀಕರಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿತು.
‘ಅಷ್ಟಕ್ಕೂ ಎಲ್ಲ ಪಟಾಕಿಗಳನ್ನು ನಿಷೇಧಿಸಿಲ್ಲ. ಈ ಆದೇಶದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ನಿಷೇಧಿಸಲಾಗಿದೆ ಎಂದು ಬಿಂಬಿಸಬಾರದು’ ಎಂದು ಪೀಠ ತಾಕೀತು ಮಾಡಿತು. ಪಟಾಕಿಯಿಂದ ಉಂಟಾಗುವ ಮಾಲಿನ್ಯದಿಂದಾಗಿ ದೆಹಲಿ ಜನರು ಅನುಭವಿಸುತ್ತಿರುವ ಕಷ್ಟ ಎಲ್ಲರಿಗೂ ತಿಳಿದಿದೆ ಎಂದು ಪೀಠ ಇದೇ ವೇಳೆ ನೆನಪಿಸಿತು. ತನ್ನ ಆದೇಶಗಳನ್ನು ಪಾಲನೆ ಮಾಡದಿದ್ದಕ್ಕೆ ನಿಮ್ಮ ಮೇಲೆ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಆರು ಪಟಾಕಿ ಉತ್ಪಾದಕರನ್ನು ಕೇಳಿತು.