ಮೈಸೂರು:ಸಾವಿರಾರು ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿ, ಯುವ ಮನಸ್ಸುಗಳಿಗೆ ಮನರಂಜನೆಯ ರಸದೌತಣ ನೀಡಿದ ಯುವ ಸಂಭ್ರಮಗೆ ಗುರುವಾರ ಅದ್ದೂರಿ ತೆರೆ ಬಿದ್ದಿತು. ಕೊನೆಯ ದಿನವೂ ಬಯಲು ರಂಗಮಂದಿರ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿಕೊಂಡಿತ್ತು.
ಸಾಂಸ್ಕೃತಿಕ ಪರಂಪರೆ, ದೇಶಭಕ್ತಿ, ಅಂಬಾರಿ ಆನೆ, ದಸರಾ ವೈಭವ, ಆರೋಗ್ಯ, ಜನಕೇಂದ್ರಿತ ಜೀವನ, ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ, ಪೌರಾಣಿಕ ಕಥೆಗಳು, ಭಾರತೀಯ ಯೋಧರ ಸಾಹಸ, ಕೊಡವ ನೃತ್ಯ ಹಾಗೂ ಕರ್ನಾಟಕ ಜಾನಪದವನ್ನು ಒಳಗೊಂಡಂತೆ ೫೮ ತಂಡಗಳು ಮನಮೋಹಕ ನೃತ್ಯ ಪ್ರದರ್ಶನ ನೀಡಿದವು. ವಿಶೇಷವಾಗಿ, ಶ್ರೀರಂಗಪಟ್ಟಣದ ಡಿ ಪಾಲ್ ಕಾಲೇಜು ವಿದ್ಯಾರ್ಥಿಗಳು ತೋರಿಸಿದ ಅರ್ಜುನ ಆನೆ ಕುರಿತ ನೃತ್ಯ ರೂಪಕಕ್ಕೆ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು.
ಒಂಬತ್ತು ದಿನಗಳ ಯುವ ಸಂಭ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸುಮಾರು 485 ತಂಡಗಳು ತಮ್ಮ ಕಲೆ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದವು. ಪ್ರತೀ ಸಂಜೆ ಕಾರ್ಯಕ್ರಮ ಆರಂಭವಾದ ಕ್ಷಣದಿಂದಲೇ ಬಯಲು ರಂಗಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ರಂಗಮಂದಿರದೊಳಗಿನ ಆಸನಗಳು ಖಾಲಿಯಾದಂತೆ ಹೊರಗಿದ್ದ ಪ್ರೇಕ್ಷಕರನ್ನು ಒಳಗೆ ಬಿಡುತ್ತಿದ್ದರು. ನಿರೀಕ್ಷೆಗಿಂತ ಹೆಚ್ಚಿನ ಜನ ಸೇರುವ ಸಂದರ್ಭದಲ್ಲೂ ಪೊಲೀಸರ ಶಿಸ್ತಿನ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ