ಚಾಮುಂಡಿ ಬೆಟ್ಟದ ಐತಿಹಾಸಿಕ ಏಕಶಿಲಾ ನಂದಿ ವಿಗ್ರಹಕ್ಕೆ ಸೋಮವಾರ ಅದ್ದೂರಿಯಾದ ಮಹಾಭಿಷೇಕ ನೆರವೇರಿತು. ಐದು ನೂರು ವರ್ಷಗಳ ಪಾರಂಪರ್ಯ ಹೊಂದಿರುವ ಈ ಮಹಾಭಿಷೇಕವನ್ನು ನೋಡುವುದಕ್ಕಾಗಿ ಬೆಟ್ಟದ ಗ್ರಾಮಸ್ಥರು ಹಾಗೂ ನೂರಾರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿವಿಧ ಬಣ್ಣಗಳಲ್ಲಿ ಕಂಗೊಳಿಸಿದ ನಂದಿಯನ್ನು ಭಕ್ತಿಭಾವದಿಂದ ಕಣ್ಣಾರೆ ಕಂಡರು.
ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ 20ನೇ ವರ್ಷದ ಮಹಾಭಿಷೇಕಕ್ಕೆ ಬೆಳಿಗ್ಗೆ 10.01ಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೋಮನಾಥಾನಂದ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ಪೂರ್ವಕ ಚಾಲನೆ ನೀಡಿದರು.
ವಿಗ್ರಹದ ಅಂಗಳದಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟು ಪೂಜೆ ಸಲ್ಲಿಸಿದ ನಂತರ, ನಂದಿಯ ಮೇಲ್ಭಾಗದಲ್ಲಿ ಸಿದ್ದಪಡಿಸಿದ್ದ ಅಟ್ಟಣಿಗೆಯಲ್ಲಿ ನಿಂತು 38 ವಿಭಿನ್ನ ಬಗೆಯ ಅಭಿಷೇಕಗಳನ್ನು ನೆರವೇರಿಸಲಾಯಿತು. ಪಾದ್ಯ, ಅರ್ಥ್ಯ, ಆಚಮನದ ನಂತರ ಗಂಧ ಪಂಚಕ, ಪಂಚಾಮೃತ, ಫಲಪೂಜಾಮೃತ, ರಸಪಂಚಾಮೃತ, ಪಿಷ್ಟ ಪಂಚಕಾಭಿಷೇಕ ಹೀಗೆ ಪ್ರತಿಯೊಂದು ವಿಧಿಯೂ ನಂದಿಯನ್ನು ಮತ್ತಷ್ಟು ಮನಮುಟ್ಟುವಂತೆ ಕಂಗೊಳಿಸಿ ಹೊರಹೊಮ್ಮಿಸಿತು.
ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ, ಕದಳೀ, ದ್ರಾಕ್ಷಿ, ಬೇಲ, ಖರ್ಜೂರ, ಸೌತೆಕಾಯಿ, ಎಳನೀರು, ಕಬ್ಬಿನ ಹಾಲು, ನಿಂಬೆ, ಎಳ್ಳೆಣ್ಣೆ, ಪಾಯಸ, ಗೋಧಿ, ಕಡಲೆ, ಹೆಸರು ಹಿಟ್ಟು, ದರ್ಬೆ, ಪತ್ರೆ, ಕೇಸರಿ, ಪುಷ್ಪ ಮೊದಲಾದ ವಿವಿಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಪ್ರತಿಯೊಂದು ಅಭಿಷೇಕವೂ ನಂದಿಯ ವಿಗ್ರಹಕ್ಕೆ ಹೊಸದೊಂದು ಕಳೆ ತುಂಬಿತು.
ಕನಕಾಭಿಷೇಕ ಸಮಯದಲ್ಲಿ ನಂದಿಯ ಮೇಲಿಂದ ನಾಣ್ಯಗಳ ಮಳೆ ಸುರಿಯಿತು. ಪಂಚಾಮೃತ, ಶಾಲ್ಯಾನ್ನ, ಸುಗಂಧ ದ್ರವ್ಯಾಭಿಷೇಕ ಹಾಗೂ ಪಂಚಕಲಶ ವಿಸರ್ಜನೆಯೊಂದಿಗೆ ಮಹಾಭಿಷೇಕ ಮುಕ್ತಾಯವಾಯಿತು. ಒಂದೂವರೆ ಗಂಟೆ ನಡೆದ ಈ ವಿಧಿವಿಧಾನ ಭಕ್ತರನ್ನು ಆನಂದ ಮತ್ತು ಭಕ್ತಿ ಭಾವದಲ್ಲಿ ತೇಲಿಸಿತು. ಬಳಿಕ ಅಷ್ಟೋತ್ತರ, ನೈವೇದ್ಯ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

