Thursday, October 23, 2025

Latest Posts

ನೇಪಾಳದಲ್ಲಿ BAN ವಾಪಸ್ ಕೊನೆಗೂ ತಲೆಬಾಗಿದ ಸರ್ಕಾರ

- Advertisement -

ನೇಪಾಳದಲ್ಲಿ ಸಾಮಾಜಿಕ ಜಾಲತಾಣ ಆ್ಯಪ್‌ಗಳನ್ನು ನಿರ್ಬಂಧಿಸಲಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆಯನ್ನು ಎದುರಿಸಲು ವಿಫಲವಾದ ನೇಪಾಳ ಸರ್ಕಾರ ಕೊನೆಗೂ ತನ್ನ ನಿರ್ಬಂಧ ಹಿಂಪಡೆಯಲು ತೀರ್ಮಾನಿಸಿದೆ. ಆದರೆ, ಈ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಕನಿಷ್ಠ 19 ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವುದು ದುಃಖದ ಸಂಗತಿಯಾಗಿದೆ.

ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಿರೋಧಿಸಿ ನೇಪಾಳದ ಯುವ ಸಮುದಾಯವೇ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು. ಪೊಲೀಸರೊಂದಿಗೆ ನಡೆದ ಘರ್ಷಣೆಯ ವೇಳೆ ಹಲವರು ತಮ್ಮ ಪ್ರಾಣ ಕಳೆದುಕೊಂಡರು. ಈ ಬೃಹತ್ ಪ್ರತಿಭಟನೆ ಸರ್ಕಾರದ ಕಣ್ಣು ತೆರೆಸಿದ್ದು, ಸಾಮಾಜಿಕ ಜಾಲತಾಣ ಆ್ಯಪ್‌ಗಳ ಮೇಲಿನ ನಿರ್ಬಂಧವನ್ನು ತಕ್ಷಣವೇ ತೆಗೆದು ಹಾಕುವಂತೆ ಮಾಡಿತು.

ಈ ಕುರಿತು ನೇಪಾಳ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ತನ್ನ ಹಿಂದಿನ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ಘೋಷಿಸಿದರು. ಆದರೆ, ಸರ್ಕಾರ ತನ್ನ ನಿರ್ಧಾರದ ಬಗ್ಗೆ ವಿಷಾದಿಸುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು.

ನೇಪಾಳದಲ್ಲಿ ನಿಷೇಧಿಸಲ್ಪಟ್ಟ ಪ್ರಮುಖ ಸಾಮಾಜಿಕ ಜಾಲತಾಣ ಆ್ಯಪ್‌ಗಳು
ಫೇಸ್‌ಬುಕ್‌
ಎಕ್ಸ್‌
ಇನ್ಸ್ಟಾಗ್ರಾಮ್‌
ವಾಟ್ಸಾಪ್‌
ಟಿಕ್‌ಟಾಕ್‌
ಟೆಲಿಗ್ರಾಮ್‌
ಸ್ನಾಪ್‌ಚಾಟ್‌
ಯೂಟ್ಯೂಬ್‌
ಲಿಂಕ್ಡಿನ್‌
ವೈಬರ್‌

ಯುವ ಸಮುದಾಯದ ಬೇಡಿಕೆಗೆ ತಲೆಬಾಗಿರುವ ಸರ್ಕಾರ, ತುರ್ತು ಸಚಿವ ಸಂಪುಟ ಸಭೆಯ ನಂತರ ಈ ನಿರ್ಧಾರ ತೆಗೆದುಕೊಂಡಿದೆ. ಈ ಸಂದರ್ಭ ಪೃಥ್ವಿ ಸುಬ್ಬಾ ಗುರುಂಗ್ ಅವರು ಹಿಂಸಾತ್ಮಕ ಪ್ರತಿಭಟನೆಗಳು ಪರಿಹಾರವಲ್ಲ ಎಂದು ಯುವಕರಿಗೆ ಮನವಿ ಮಾಡಿದರು. ಹಾಗೇ, ಒಂದು ದಿನದ ಹಿಂಸಾಚಾರವನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನೂ ರಚಿಸಲಾಗಿದೆ ಮತ್ತು 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.

ನೇಪಾಳದ ಪ್ರಧಾನ ಮಂತ್ರಿ ಕೆಪಿ ಶರ್ಮಾ ಓಲಿ ಅವರು ಮಾತನಾಡಿ, ಎಕ್ಸ್‌ (ಟ್ವಿಟ್ಟರ್) ನೇಪಾಳದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಉತ್ತೇಜಿಸುತ್ತಿತ್ತುಎಂದು ಗಂಭೀರ ಆರೋಪ ಮಾಡಿದರು. ಇದೇ ಕಾರಣಕ್ಕೆ ಫೇಸ್‌ಬುಕ್‌, ಎಕ್ಸ್‌, ಇನ್ಸ್ಟಾಗ್ರಾಮ್‌ ಸೇರಿದಂತೆ ಹಲವು ಆ್ಯಪ್‌ಗಳನ್ನು ಸರ್ಕಾರ ಸ್ಥಗಿತಗೊಳಿಸಿತ್ತು.

ಆದರೆ, ಈ ನಿರ್ಧಾರವನ್ನು ವಿರೋಧಿಸಿ ಸೆಪ್ಟೆಂಬರ್‌ 8, ಸೋಮವಾರ ದೇಶದಾದ್ಯಂತ ಯುವ ಸಮುದಾಯ ಭಾರೀ ಪ್ರತಿಭಟನೆಗೆ ದಂಗೆಯಿತ್ತು. ಪ್ರತಿಭಟನಾಕಾರರು, ಸರ್ಕಾರ ತನ್ನ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಮತ್ತು ಜನರ ಮಾಹಿತಿಯ ಹಕ್ಕನ್ನು ಕಸಿದುಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದೆ ಎಂದು ಆಕ್ರೋಶ ಹೊರಹಾಕಿದ್ದರು ಅಂತಿಮವಾಗಿ, ಸರ್ಕಾರ ತನ್ನ ನಿರ್ಬಂಧವನ್ನು ಹಿಂಪಡೆಯುವ ಮೂಲಕ ಪ್ರತಿಭಟನಾನಿರತ ಯುವ ಸಮುದಾಯಕ್ಕೆ ದೊಡ್ಡ ಜಯ ಒದಗಿಸಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ 

- Advertisement -

Latest Posts

Don't Miss