Tuesday, September 23, 2025

Latest Posts

ಬೆಟ್ಟದಿಂದ ಆರಂಭವಾದ ನಾಡಹಬ್ಬ ಬಾನುರಿಂದ ಭವ್ಯ ಚಾಲನೆ !

- Advertisement -

ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್, ಸೋಮವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ 11 ದಿನಗಳ ವೈಭವಯುತ ಉತ್ಸವಕ್ಕೆ ವಿಧಿವತ್ತಾಗಿ ಚಾಲನೆ ನೀಡಿದರು. ಬೆಳಗ್ಗೆ 10.10ರಿಂದ 10.40ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ನಡೆದ ಈ ಪೂಜಾ ಸಮಾರಂಭವನ್ನು ಸಾಕ್ಷಿಯಾಗಿ ಸಾವಿರಾರು ಭಕ್ತರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ಉದ್ಘಾಟನಾ ವೇದಿಕೆಯಲ್ಲಿ 30–45 ಗಣ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗೆ 1200 ಆಸನಗಳನ್ನು ಕಲ್ಪಿಸಲಾಗಿದೆ. ಉದ್ಘಾಟನೆಯ ಬಳಿಕ ಬಾನು ಮುಷ್ತಾಕ್ ಅವರಿಗೆ ಸಿಎಂ ಹಾಗೂ ಇತರ ಗಣ್ಯರು ಸನ್ಮಾನ ಸಲ್ಲಿಸಿದರು. ಆದರೆ, ಬಾನು ಮುಷ್ತಾಕ್ ಅವರನ್ನು ಉದ್ಘಾಟಕರಾಗಿ ಸರ್ಕಾರ ಆಯ್ಕೆ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆಗಳಿಂದ ಟೀಕೆಗಳು ಕೇಳಿಬಂದಿದ್ದವು.

ನಾಡಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ಮೇಳ, ಯೋಗ ದಸರಾ, ನವರಾತ್ರಿ ರಂಗೋತ್ಸವ, ಕ್ರೀಡಾಕೂಟ, ಕುಸ್ತಿ ಪಂದ್ಯಾವಳಿ, ಆಹಾರ ಮೇಳ, ಫಲ-ಪುಷ್ಪ ಪ್ರದರ್ಶನಗಳು ಕೂಡ ಸೋಮವಾರದಿಂದ ಆರಂಭಗೊಂಡಿವೆ. ಮೈಸೂರಿನ ವಿವಿಧೆಡೆ ಈ ಕಾರ್ಯಕ್ರಮಗಳು ಭವ್ಯವಾಗಿ ನಡೆಯುತ್ತಿದ್ದು, ದಸರಾ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿವೆ.

ಈ ಬಾರಿ ರಾಜ್ಯದ ಎಲ್ಲ ಜಲಾಶಯಗಳು ತುಂಬಿ ಹರಿದು, ಮಳೆ-ಬೆಳೆ ಚೆನ್ನಾಗಿ ಇರುವುದರಿಂದ ದಸರಾವನ್ನು ಅತ್ಯಂತ ವೈಭವದಿಂದ ಆಚರಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಸೆಪ್ಟೆಂಬರ್ 22ರಂದು ಒಂದೇ ದಿನ ನಗರದ ವಿವಿಧ ವೇದಿಕೆಗಳಲ್ಲಿ 13 ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದ್ದು, ನಾಗರಿಕರು ಹಾಗೂ ಪ್ರವಾಸಿಗರಿಗೆ ಸಂಭ್ರಮದ ಹಬ್ಬವಾಗಲಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss