ಪತ್ನಿಯ ದಬ್ಬಾಳಿಕೆ ವರ್ತನೆಯಿಂದ ಬೇಸತ್ತು, ಆಕೆಯ ಹತ್ಯೆಗೆ ಸುಪಾರಿ ನೀಡಿದ ಪತಿ ಜೈಲು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಪತ್ನಿ ನಾಗರತ್ನ (46) ಅವರ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಪಾನಿಪೂರಿ ವ್ಯಾಪಾರಿ ಮಹೇಶ್ (44) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. “ನಾನು ಗಳಿಸಿದ್ದ ಹಣವನ್ನೆಲ್ಲ ಕಿತ್ತುಕೊಂಡು, ಬಡ್ಡಿ ವ್ಯವಹಾರ ನಡೆಸುತ್ತಿದ್ದ ಪತ್ನಿ ನನಗೆ ಅವಮಾನ ಮಾಡುತ್ತಿದ್ದರು. ಆ ಮಾನಸಿಕ ಕಿರುಕುಳದಿಂದ ಬೇಸತ್ತು ಹತ್ಯೆಗೆ ಸುಪಾರಿ ನೀಡಿದೆ” ಎಂದು ಮಹೇಶ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗರತ್ನ ಅವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ವಿರಾಜಪೇಟೆಯ ಭಾಸ್ಕರ್ ಮತ್ತು ಅಭಿಷೇಕ್ ಎಂಬ ಇಬ್ಬರನ್ನು ಮೇಟಗಳ್ಳಿ ಠಾಣೆ ಪೊಲೀಸರು ಘಟನೆ ನಡೆದ ಆರು ಗಂಟೆಗಳೊಳಗೆ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮಂಗಳವಾರ ಸಂಜೆ ಸುಮಾರು 7 ಗಂಟೆ ವೇಳೆಗೆ, ಮನೆಯಲ್ಲಿದ್ದ ನಾಗರತ್ನ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ, ಮನೆಯ ಗ್ಯಾಸ್ ಸಿಲಿಂಡರ್‌ನಿಂದ ಸೋರಿಕೆ ಉಂಟುಮಾಡಿ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಪೆಟ್ರೋಲ್ ಸುರಿದು ಸಾಕ್ಷ್ಯ ನಾಶ ಮಾಡಲು ಯತ್ನಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ನಂತರ ನೆರೆಹೊರೆಯವರು ತಕ್ಷಣ ಮಹೇಶ್‌ಗೆ ಮಾಹಿತಿ ನೀಡಿ, ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ, ಗಂಭೀರವಾಗಿ ಗಾಯಗೊಂಡಿದ್ದ ನಾಗರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮಹೇಶ್, “ಯಾರೋ ದುಷ್ಕರ್ಮಿಗಳು ನನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದಾರೆ” ಎಂದು ಏನೂ ಗೊತ್ತಿಲ್ಲದವನಂತೆ ವರ್ತಿಸಿದ್ದಾನೆ.
ಮಹೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ನಾಗರತ್ನ ಅವರಿಗೆ ಶತ್ರುಗಳಿದ್ದಾರೆಯೇ ಎಂಬ ಕುರಿತು ಮಹೇಶ್‌ನನ್ನು ಪ್ರಶ್ನಿಸಿದಾಗ, ಆತ ಗಾಬರಿಗೊಂಡು ಅಸ್ಪಷ್ಟ ಉತ್ತರ ನೀಡಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಮಹೇಶ್‌ನನ್ನು ವಶಕ್ಕೆ ಪಡೆದು ಕಠಿಣವಾಗಿ ವಿಚಾರಣೆ ನಡೆಸಿದಾಗ, ಕೊಲೆ ಯತ್ನದ ಹಿಂದಿರುವ ಸಂಚು ಸಂಪೂರ್ಣವಾಗಿ ಬಹಿರಂಗವಾಗಿದೆ. ಪ್ರಸ್ತುತ ಮಹೇಶ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




