ಬೆಂಗಳೂರು : ರಾಜ್ಯಾದ್ಯಂತ ವರುಣನ ಅಬ್ಬರ ಮುಂದುವರೆದಿದ್ದು, ಮುಂದಿನ ಒಂದು ವಾರದ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಹಿನ್ನೆಲೆ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಅಲ್ಲದೆ ಇದೀಗ ಮತ್ತೆ ಕರಾವಳಿ ಭಾಗದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಗುಡುಗು ಸಹಿತವಾಗಿ ವರುಣ ಆರ್ಭಟಿಸಲಿದ್ದಾನೆ ಎಂದು ಎಚ್ಚರಿಕೆ ನೀಡಲಾಗಿದೆ.
ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ಹಲವೆಡೆ ಮಳೆಯಾಗಲಿದೆ. ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.
ಇನ್ನೂ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಶನಿವಾರ ಅಲ್ಲಲ್ಲಿ ಮಳೆಯಾಗಿತ್ತು. ಎಚ್ಎಎಲ್ನಲ್ಲಿ 28.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 28.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 28.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಕಳೆದ 24 ಗಂಟೆಗಳಲ್ಲಿ ಶಿರಾಲಿ, ಮಂಕಿ, ಗೇರುಸೊಪ್ಪ, ಕುರ್ಡಿ, ಚಿಂಚೋಳಿ, ಗದಗ, ಮಂಗಳೂರು, ಹೊನ್ನಾವರ, ಶಕ್ತಿನಗರ, ಆಗುಂಬೆ, ಲಿಂಗಸುಗೂರು, ಹುಮ್ನಾಬಾದ್, ಕೆರೂರುಗಳಲ್ಲಿ ವರುಣ ಕೃಪೆ ತೋರಿದ್ದಾನೆ.
ಇನ್ನುಳಿದಂತೆ ಮಾಣಿ, ಮಂಠಾಳ, ಸುಳ್ಯ, ಇಳಕಲ್, ಗೋಕರ್ಣ, ಕ್ಯಾಸಲ್‌ರಾಕ್, ಪುತ್ತೂರು, ಬಂಟವಾಳ, ಪಾವಗಡ, ಕಾರ್ಕಳ, ಭಾಗಮಂಡಲ, ಬೆಳ್ಳೂರು, ಅಂಕೋಲಾ, ನಲ್ವತವಾಡ, ಹುಣಸಗಿ, ಹುನಗುಂದ ಭಾಗದಲ್ಲೂ ಮಳೆಯಾಗಿದೆ.
ಅಲ್ಲದೇ ಬಾದಾಮಿ, ನರಗುಂದ, ಆಲಮಟ್ಟಿ, ಜೋಯ್ಡಾ, ಅಣ್ಣಿಗೆರೆ, ಕಮಲಾಪುರ, ಸಿಂಧನೂರು, ಕುಷ್ಟಗಿ, ಕಮ್ಮರಡಿ, ಕೊಪ್ಪ, ಕೋಟಾ, ಹುಂಚದಕಟ್ಟೆ, ಪೊನ್ನಂಪೇಟೆ, ಕಳಸ, ಮದ್ದೂರು, ಜಯಪುರ, ಸೋಮವಾರಪೇಟೆಗಳಲ್ಲಿಯೂ ವರ್ಷಧಾರೆಯಾಗಿದೆ.
ಇನ್ನೂ ಸಿದ್ದಾಪುರ, ಧರ್ಮಸ್ಥಳ, ಬಿಳಗಿ, ಮಾನ್ವಿ, ಮುನಿರಾಬಾದ್, ತಾವರಗೇರಾ, ಸೇಡಂ ಮತ್ತು ಹಾವೇರಿಯಲ್ಲಿ ಭಾರೀ ಮಳೆ ದಾಖಲಾಗಿದೆ. ಹವಾಮಾನ ಇಲಾಖೆಯ ಸೂಚನೆಯಂತೆಯೇ ಜಿಲ್ಲಾಡಳಿತಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿವೆ.