www.karnatakatv.net: ರಷ್ಯಾದ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳ ಮೇಲೆ ಭಾರತದ ಅವಲಂಬನೆಯಲ್ಲಿ ಗಣನೀಯ ಇಳಿಕೆ ಕಂಡುಬoದಿದ್ದು, ಭಾರತೀಯ ಸೇನೆಯು ರಷ್ಯಾದ ಉಪಕರಣಗಳಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಸಿನಲ್ ರಿಸರ್ಚ್ ಸರ್ವಿಸ್ ವರದಿ ಹೇಳಿದೆ.
ಸಮೀಪ ಮತ್ತು ಮಧ್ಯಮ ದೂರದ ಗುರಿಯನ್ನು ಹೊಡೆದುರುಳಿಸುವ ಶಸ್ತ್ರಾಸ್ತ್ರಗಳಿಗಾಗಿ ಭಾರತವು ರಷ್ಯಾದ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮೇಲೆಯೇ ಅವಲಂಬಿತವಾಗಿದೆ ಎಂದು ಅದು ತಿಳಿಸಿದೆ. ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುವುದರ ವಿರುದ್ಧ ಸಿಎಎಟಿಎಸ್‌ಎ ಕಾಯ್ದೆಯ ಮೂಲಕ ಭಾರತದ ಮೇಲೆ ನಿರ್ಬಂಧ ಹೇರಲು ಬೈಡನ್ ಆಡಳಿತ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ. ಭಾರತ ಮತ್ತು ವಿದೇಶಗಳ ಅನೇಕ ವಿಶ್ಲೇಷಕರು ಭಾರತೀಯ ಸೇನೆಯು ರಷ್ಯಾ ಪೂರೈಸಿದ ಉಪಕರಣಗಳಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದ್ದಾರೆ ಎಂದು ಸ್ವತಂತ್ರ ಸಂಸ್ಥೆಯಾಗಿರುವ ಸಿಆರ್‌ಎಸ್ ತನ್ನ ‘ರಷ್ಯನ್ ಶಸ್ತ್ರಾಸ್ತ್ರ ಮಾರಾಟ ಮತ್ತು ರಕ್ಷಣಾ ಕೈಗಾರಿಕಾ ವರದಿ’ಯಲ್ಲಿ ತಿಳಿಸಿದೆ.
ಅಮೆರಿಕದ ಹಿರಿಯ ತಜ್ಞರೊಬ್ಬರ ಪ್ರಕಾರ, ನವದೆಹಲಿಯು ರಷ್ಯಾದೊಂದಿಗೆ ಶಸ್ತ್ರಾಸ್ತ್ರ ಖರೀದಿ ಮುಂದುವರಿಸಿರುವುದನ್ನು ಗಮನಿಸಿದರೆ ಭಾರತದ ಮೇಲೆ ಮಾಸ್ಕೊದ ಪ್ರಭಾವ ಇನ್ನೂ ಇರುವುದನ್ನು ಸೂಚಿಸುತ್ತದೆ. ಅನ್ಯ ದೇಶಗಳು ಭಾರತಕ್ಕೆ ರಫ್ತು ಮಾಡದಂತಹ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳು ಭಾರತಕ್ಕೆ ರಷ್ಯಾದ ಮೂಲಕ ಬರುತ್ತವೆ. ರಷ್ಯಾ ಸಹ ಆಕರ್ಷಕ ದರದಲ್ಲಿ ಸುಧಾರಿತ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ನೀಡುವುದನ್ನು ಮುಂದುವರಿಸಿದೆ ಎಂದು ಸಿಆರ್‌ಎಸ್ ವರದಿಯಲ್ಲಿ ಉಲ್ಲೇಖಿಸಿದೆ. 2015ರಿಂದೀಚೆಗೆ ಮೋದಿ ಸರ್ಕಾರದ ಅವಧಿಯಲ್ಲಿ ರಷ್ಯಾದಿಂದ ಉಪಕರಣಗಳ ಆಮದು ಇಳಿಕೆಯಾಗಿದೆ ಎಂಬುದನ್ನು ಗ್ರಾಫಿಕ್ ಮೂಲಕ ವರದಿಯಲ್ಲಿ ತೋರಿಸಲಾಗಿದೆ.