ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿರುವ ಉಗ್ರರನ್ನು ಸಾಕುತ್ತಿರುವ ಪಾಪಿಸ್ತಾನ ಭಾರತದ ಒಂದೊಂದು ಹೊಡೆತಕ್ಕೂ ಸಿಲುಕಿ ನಲುಗುತ್ತಿದೆ. ಒಂದೆಡೆ ಅರಾಜಕತೆ ಹಾಗೂ ಬರಗಾಲ ಆವರಿಸುತ್ತಿದ್ದರೂ ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ.
ಕಳೆದೆರಡು ದಿನಗಳ ಹಿಂದಷ್ಟೇ ಭಯೋತ್ಪಾದಕರ ರಾಷ್ಟ್ರದ ವಿರುದ್ಧ ಭಾರತ ಸರ್ಕಾರವು ಐದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೊಡ್ಡ ಶಾಕ್ ನೀಡಿತ್ತು. ಇದಾದ ಬಳಿಕ ಅಕ್ಷರಶಃ ಕಂಗಾಲಾಗಿರುವ ಪಾಪಿಸ್ತಾನ ಭಾರತದ ವಿರುದ್ಧ ಬೊಗಳಲು ಪ್ರಾರಂಭ ಮಾಡಿದೆ.
ಐತಿಹಾಸಿಕ ನಿರ್ಧಾರವಾಗಿರುವ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವ ಭಾರತದ ವಿರುದ್ಧ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಹಾಗೂ ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಹತಾಶನಾಗಿದ್ದಾನೆ. ಅಲ್ಲದೆ ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟು , ಸಿಂಧೂ ನದಿ ನೀರು ನಮ್ಮ ಹಕ್ಕು, ಅದು ಪಾಕಿಸ್ತಾನಿಯರ ಜೀವನಾಡಿಯಾಗಿದೆ. ಒಂದು ವೇಳೆ ಈ ನದಿ ನೀರಿನ ಹಂಚಿಕೆಯ ವಿಚಾರದಲ್ಲಿನ ಒಪ್ಪಂದ ರದ್ದುಗೊಳಿಸಿದರೆ ಭಾರತೀಯರ ರಕ್ತ ಹರಿಯುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ.
ನಾಲಿಗೆ ಹರಿಬಿಟ್ಟ ಭುಟ್ಟೋ..
ಸಿಂಧೂ ನದಿಯ ತಟದಲ್ಲಿಯೇ ನಿಂತು ಭಾರತದ ವಿರುದ್ಧ ಬೆಂಕಿಯುಗುಳಿದ ಈ ಕಂಗಾಲ್ ಕಂಪನಿ ನಾಯಕ ಭುಟ್ಟೋ, ಸಿಂಧೂ ನಮ್ಮದೇ ಆಗಿರುತ್ತದೆ. ನಾನು ಭಾರತಕ್ಕೆ ಹೇಳಲು ಬಯಸುತ್ತೇನೆ, ನಮ್ಮ ನೀರು ಪಾಕಿಸ್ತಾನಕ್ಕೆ ಹರಿಯಬೇಕು, ಇಲ್ಲವಾದರೆ ಭಾರತೀಯರ ರಕ್ತ ಹರಿಸಬೇಕಾಗುತ್ತದೆ. ಈ ನದಿಯ ಒಪ್ಪಂದವನ್ನು ಅಮಾನತುಗೊಳಿಸಿ ಭಾರತ ತನ್ನ ಮೇಲೆ ಅಪಾಯವನ್ನು ಎಳೆದುಕೊಂಡಿದೆ. ಪಹಲ್ಗಾಮ್ ದಾಳಿಯನ್ನೇ ನೆಪವಾಗಿಟ್ಟುಕೊಂಡು ಭಾರತವು ತನ್ನಲ್ಲಿಯ ಭದ್ರತೆಯಲ್ಲಿನ ದೋಷಗಳನ್ನು ಮುಚ್ಚಿ ಹಾಕಲು ದೇಶದ ಜನರ ಗಮನವನ್ನು ಬೇರೆಡೆ ಕೇಂದ್ರಿಕರಿಸಲು ಮುಂದಾಗಿದೆ. ಸಿಂಧೂವನ್ನು ನಾವು ಬಿಟ್ಟುಕೊಡುವುದಿಲ್ಲ ಎಂದು ಭುಟ್ಟೋ ಬಾಯಿ ಬಡಿದುಕೊಂಡಿದ್ದಾನೆ.
ಸಿಂಧೂ ನಮ್ಮದೇ ಆಗಿದೆ..
ಸಿಂಧೂ ಜಲ ವಿವಾದ ಸೇರಿದಂತೆ ಭಾರತ ಕೈಗೊಂಡ ಈ ಕ್ರಮಗಳು ಎರಡೂ ದೇಶಗಳ ನಡುವಿನ ಸ್ಥಿತಿಯನ್ನು ಹದಗೆಡಿಸಿದೆ. ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸುವ ಭಾರತದ ನಿರ್ಧಾರವು ಕಾನೂನುಬಾಹಿರ ಮತ್ತು ಅಮಾನವೀಯವಾಗಿದೆ. ನಾವು ಪಾಕಿಸ್ತಾನದ ಹಿತದೃಷ್ಟಿಯಿಂದ ಇರುವ ವಿಚಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುತ್ತೇವೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ. ನಾನು ಸಿಂಧೂ ನದಿಯ ದಡದಲ್ಲಿ ನಿಂತು ಭಾರತಕ್ಕೆ ಸಿಂಧೂ ನಮ್ಮದು ಮತ್ತು ಅದು ನಮ್ಮದೇ ಆಗಿಯೇ ಉಳಿಯುತ್ತದೆ ಎಂದು ಹೇಳಲು ಬಯಸುತ್ತೇನೆ
ಆಕ್ರಮಣಕಾರಿ ನಾಯಕತ್ವದ ಪ್ರಚೋದನೆ..!
ಸಿಂಧೂ ನದಿಯ ಮೇಲೆ ಭಾರತ ದಾಳಿ ಮಾಡಿದೆ. ಅವರ ಜನಸಂಖ್ಯೆ ನಮಗಿಂತ ಹೆಚ್ಚಿರಬಹುದು, ಆದರೆ ಪಾಕಿಸ್ತಾನದ ಜನರು ಧೈರ್ಯಶಾಲಿಗಳು. ನಾವು ಗಡಿಯಲ್ಲಿ ಮತ್ತು ಪಾಕಿಸ್ತಾನದ ಒಳಗೆ ಹೋರಾಡುತ್ತೇವೆ. ನಮ್ಮ ಧ್ವನಿ ಭಾರತಕ್ಕೆ ಸೂಕ್ತ ಉತ್ತರ ನೀಡುತ್ತದೆ ಎಂದಿರುವ ಭುಟ್ಟೋ ಹುಂಬತನದ ಈ ಹೇಳಿಕೆಯು ಭಯೋತ್ಪಾದನೆಯನ್ನು ಖಂಡಿಸುವ ಬದಲು, ಪಾಕಿಸ್ತಾನದ ನಾಯಕತ್ವವು ಆಕ್ರಮಣಕಾರಿ ಭಯೋತ್ಪಾದಕತೆಗೆ ಉತ್ತೇಜಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಪಹಲ್ಗಾಮ್ ದಾಳಿಯು ಇಡೀ ದೇಶವನ್ನು ದುಃಖದ ಕಡಲಿನಲ್ಲಿ ಮುಳುಗಿಸಿರುವ ಮತ್ತು ಪ್ರಪಂಚದಾದ್ಯಂತ ಆಕ್ರೋಶದ ಅಲೆಯನ್ನು ಎಬ್ಬಿಸಿದೆ. ಈ ಸಮಯದಲ್ಲಿ, ಈ ಹೇಳಿಕೆಯು ಭಾರತದ ವಿರುದ್ಧ ಬಹಿರಂಗ ಹಿಂಸಾಚಾರಕ್ಕೆ ಪ್ರಚೋದನೆಯಾಗಿದ್ದು, ಹೇಳಿಕೆಯು ಖಂಡಿತವಾಗಿಯೂ ಪಾಕಿಸ್ತಾನಕ್ಕೆ ತಿರುಗುಬಾಣವಾಗಲಿದೆ. ಭಾರತದ ಒಂದೊಂದು ನಿರ್ಧಾರಗಳು ಪಾಕಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಾಗಿದ್ದು, ಹೀಗಾಗಿ ಕಂಗೆಟ್ಟು, ಹತಾಶರಾಗಿ, ದಿಕ್ಕು ತೋಚದೆ ಮನಬಂದಂತೆ ದಿನಕ್ಕೊಂದರಂತೆ ಹೇಳಿಕೆ ನೀಡುತ್ತಿರುವ ಪಾಪರ್ ಪಾಕಿಸ್ತಾನದ ನಾಯಕರು ಕ್ಷಣ ಕ್ಷಣಕ್ಕೂ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ.