www.karnatakatv.net: ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದಕರ ಸುರಕ್ಷಿತ ತಾಣವಾಗಿ ಮಾಡಬಾರದು ಎಂದು ಭಾರತ ಮತ್ತು ಅಮೆರಿಕ ತಾಲಿಬಾನ್‌ಗೆ ಒತ್ತಾಯಿಸಿದೆ.
ಅಮೆರಿಕ-ಭಾರತ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವದ ಅಡಿಯಲ್ಲಿ ಭಯೋತ್ಪಾದನಾ ನಿಗ್ರಹದ ಕುರಿತು ಜಂಟಿ ಸಂವಾದ ನಡೆಸಿ, ಅಫ್ಘಾನ್ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು ಅಥವಾ ದಾಳಿ ಮಾಡಲು, ಆಶ್ರಯ ನೀಡಲು, ಭಯೋತ್ಪಾದಕರಿಗೆ ತರಬೇತಿ ನೀಡಲು, ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಅಥವಾ ಹಣಕಾಸು ಒದಗಿಸಲು ಎಂದಿಗೂ ಬಳಸಬಾರದು ಎಂದು ತಾಲಿಬಾನ್ ಗೆ ಭಾರತ ಹಾಗೂ ಅಮೆರಿಕ ಕರೆ ನೀಡಿದೆ. ಕಾನೂನು ಜಾರಿ, ಮಾಹಿತಿ ಹಂಚಿಕೆ, ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಭಯೋತ್ಪಾದನಾ ನಿಗ್ರಹ ಸವಾಲುಗಳ ಮೇಲೆ ಕಾರ್ಯತಂತ್ರದ ಒಮ್ಮುಖದ ಮೇಲೆ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಅಮೆರಿಕ ಮತ್ತು ಭಾರತ ಮುಂದಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜನರು ಮತ್ತು ಸರ್ಕಾರದೊಂದಿಗೆ ಒಟ್ಟಾಗಿ ನಿಲ್ಲಲು ನಾವು ಬದ್ಧರಿದ್ದೇವೆ ಎಂದು ಅಮೆರಿಕ ತಿಳಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಲ್-ಖೈದಾ, ಐಸಿಸ್, ಲಷ್ಕರ್-ಎ-ತೊಯ್ಬಾ ಮತ್ತು ಜೈಷ್-ಎ-ಮೊಹಮ್ಮದ್ ಸೇರಿದಂತೆ ಎಲ್ಲಾ ಭಯೋತ್ಪಾದನಾ ಗುಂಪುಗಳ ವಿರುದ್ಧ ಸಂಘಟಿತ ಕ್ರಮಕ್ಕೆ ಕರೆ ನೀಡಲಾಗಿದೆ.