ವಿಶ್ವದ ಶ್ರೀಮಂತ ದೇವಾಲಯವೆನಿಸಿಕೊಂಡಿರುವ ತಿರುಮಲ ತಿರುಪತಿ ದೇವಸ್ಥಾನದ ಹುಂಡಿ ಹಣವನ್ನು ದುರುಪಯೋಗ ಮಾಡಿಕೊಂಡು, ಅಲ್ಲಿನ ಸಿಬ್ಬಂದಿಯೊಬ್ಬ 140 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
2023ರ ಏಪ್ರಿಲ್ 29ರಂದು ಸಿಸಿಟಿವಿ ಪರಿಶೀಲನೆಯ ವೇಳೆ, ರವಿಕುಮಾರ್ ಎಂಬ ಸಿಬ್ಬಂದಿ ಲೆಕ್ಕ ಹಾಕುವ ವೇಳೆ ಹುಂಡಿ ಹಣ ಕದ್ದಿರುವುದು ಬಯಲಾಗಿತ್ತು. ತಪಾಸಣೆಯಲ್ಲಿ ಆತನ ಬಳಿ ₹80,000 ನಗದು ಸಿಕ್ಕಿದೆ. ವಿಚಾರಣೆ ವೇಳೆ, ಆತ ಕಳೆದ 20 ವರ್ಷಗಳಿಂದ ಇದೇ ರೀತಿ ಹಣ ಕದ್ದುಕೊಂಡು, ಚೆನ್ನೈ, ಹೈದರಾಬಾದ್ ಮತ್ತು ತಿರುಪತಿಯಲ್ಲಿ ಭಾರೀ ಆಸ್ತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ತನಿಖೆಯಲ್ಲಿ, ಆತನ ₹14 ಕೋಟಿ ಹೂಡಿಕೆ ಮಾಡಿದ್ದು, 2023ರ ವೇಳೆಗೆ ₹140 ಕೋಟಿಗೆ ಏರಿರುವುದು ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ನಂತರ ಆತ ತನ್ನ ಏಳು ಆಸ್ತಿಗಳನ್ನು ಟಿಟಿಡಿಗೆ ದಾನ ಮಾಡುವುದಾಗಿ ಹೇಳಿದ್ದ. ಇದಕ್ಕೆ ಆಗಿನ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಒಪ್ಪಿಗೆ ಸೂಚಿಸಿದ್ರು. ಅದೇ ಸಮಯದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದರೂ, ಅಚ್ಚರಿಯಂತೆ ಕೇವಲ ಒಂದು ತಿಂಗಳಲ್ಲೇ ಲೋಕ ಅದಾಲತ್‌ನಲ್ಲಿ, ಸಂಧಾನದ ಮೂಲಕ ಪ್ರಕರಣ ಮುಚ್ಚಲಾಯಿತು.
ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೇಗುಲದ ಅಕ್ರಮಗಳ ಮೇಲೆ ತೀವ್ರ ನಿಗಾ ವಹಿಸಲು ಆರಂಭಿಸಿದರು. ಪರಿಶೀಲನೆಯ ವೇಳೆ, ಟಿಟಿಡಿ ವಿಚಕ್ಷಣಾ ಅಧಿಕಾರಿ ಸತೀಶ್ ಕುಮಾರ್, ನಾನು ಪೊಲೀಸರ ಒತ್ತಡಕ್ಕೆ ಒಳಗಾಗಿ ಪ್ರಕರಣದಲ್ಲಿ ರಾಜೀನಾಮೆಗೆ ಒಪ್ಪಿಕೊಂಡಿದ್ದೆ ಎಂದು ಬಾಯಿಬಿಟ್ಟರು. ಇದನ್ನು ಆಧರಿಸಿ ಪತ್ರಕರ್ತನೊಬ್ಬ ಹೈಕೋರ್ಟ್‌ಗೆ ಮೊರೆ ಹೋದಾಗ, ನ್ಯಾಯಾಲಯವು ಲೋಕ ಅದಾಲತ್‌ನ ತೀರ್ಪನ್ನು ರದ್ದುಗೊಳಿಸಿ, ಪ್ರಕರಣದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಸೂಚನೆ ನೀಡಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ