ರಾಜ್ಯದ ನಗರಾಭಿವೃದ್ಧಿ ಇಲಾಖೆ ಕೈಗೊಂಡಿರುವ ಹೊಸ ನಿರ್ಧಾರವು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊರತುಪಡಿಸಿ, ಕರ್ನಾಟಕದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ವೈದ್ಯಕೀಯ ಆರೋಗ್ಯಾಧಿಕಾರಿ ಹುದ್ದೆಯನ್ನು ಪರೋಕ್ಷವಾಗಿ ರದ್ದುಪಡಿಸಲು ಇಲಾಖೆ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಮೈಸೂರು ಮಹಾನಗರ ಪಾಲಿಕೆಯನ್ನು ಒಳಗೊಂಡಂತೆ ಈ ನಿರ್ಧಾರ ಜಾರಿಯಾಗುವ ಸಾಧ್ಯತೆ ಇದ್ದು, ಆರೋಗ್ಯಾಧಿಕಾರಿಗಳ ಜವಾಬ್ದಾರಿಗಳನ್ನು ವೈದ್ಯರ ಬದಲು ಅಧೀಕ್ಷಕ ಎಂಜಿನಿಯರ್ ಅಥವಾ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ವರ್ಗಾಯಿಸುವ ಯೋಜನೆ ರೂಪಿಸಲಾಗಿದೆ.
ಸಾಮಾನ್ಯವಾಗಿ ವೈದ್ಯಕೀಯ ಆರೋಗ್ಯಾಧಿಕಾರಿಗಳು ಹೋಟೆಲ್, ಲಾಡ್ಜ್, ಕಲ್ಯಾಣ ಮಂಟಪಗಳು, ಹಾಸ್ಟೆಲ್, ಪಿಜಿ ಹಾಗೂ ಇತರೆ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಪರಿಶೀಲನೆ ಮಾಡುವುದು, ದಂಡ ವಿಧಿಸುವುದು, ಸ್ವಚ್ಛತಾ ಸಿಬ್ಬಂದಿ ನಿರ್ವಹಣೆ ಜೊತೆಗೆ ತ್ಯಾಜ್ಯ ವಿಲೇವಾರಿ ಮೇಲ್ವಿಚಾರಣೆ ಮಾಡುವ ಪ್ರಮುಖ ಹೊಣೆಗಾರಿಕೆ ವಹಿಸುತ್ತಾರೆ. ಇಷ್ಟೆಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಆರೋಗ್ಯಾಧಿಕಾರಿಗಳನ್ನು ಎಕ್ಸಿಕ್ಯುಟಿವ್ ಎಂಜಿನಿಯರ್ಗಳಿಂದ ಬದಲಿಸುವುದು ಅವೈಜ್ಞಾನಿಕ ನಡೆಯೆಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಮಾಜಿ ಮೈಸೂರು ಮೇಯರ್ ಒಬ್ಬರು ಮಾತನಾಡಿ, ಆರೋಗ್ಯಾಧಿಕಾರಿಯ ಪಾತ್ರ ಕೇವಲ ಸ್ವಚ್ಛತೆಗೆ ಸೀಮಿತವಲ್ಲ. ಡೆಂಗ್ಯೂ, ಕಾಲರಾ ಮೊದಲಾದ ರೋಗಗಳು ಜನಜೀವನವನ್ನು ಅಸ್ಥವ್ಯಸ್ಥಗೊಳೀಸುವ ವೇಳೆ ವೈದ್ಯಕೀಯ ಪರಿಣಿತಿ, ಮಾರ್ಗದರ್ಶನ ಮತ್ತು ತ್ವರಿತ ಕ್ರಮ ಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ಎಂಜಿನಿಯರ್‌ಗಳು ವೈದ್ಯರ ಬದಲಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಬಿಜೆಪಿ ಮಾಜಿ ಕಾರ್ಪೊರೇಟರ್ ಬಿ.ವಿ. ಮಂಜುನಾಥ್ ಪ್ರತಿಕ್ರಿಯಿಸಿ, ಕೊವಿಡ್ ಸಮಯದಲ್ಲಿ ಆರೋಗ್ಯಾಧಿಕಾರಿಗಳು ಜೀವವೈದ್ಯಕೀಯ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಯಂತ್ರಣ, ಸ್ಯಾನಿಟೈಸೇಶನ್, ಔಷಧ ವಿತರಣೆ ಸೇರಿದಂತೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಗ್ರೇಟರ್ ಮೈಸೂರು ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ವೈದ್ಯರ ಬದಲು ಎನ್ವಿರಾನ್ಮೆಂಟಲ್ ಎಂಜಿನಿಯರ್‌ಗಳನ್ನು ನೇಮಕ ಮಾಡುವುದು ಸರಿಯಲ್ಲ ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಹಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿಯೂ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು, ಆದೇಶ ಹಿಂಪಡೆಯುವಂತೆ ಹಲವು ಮನವಿಗಳು ಸಲ್ಲಿಕೆಯಾಗಿವೆ.




