ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಶಕ್ತಿ’ ಯೋಜನೆ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ನಿಜವಾದ ಕ್ರಾಂತಿ ತಂದಿದೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ನವೀಕೃತ ಅಧ್ಯಯನ ವರದಿ ಸ್ಪಷ್ಟಪಡಿಸಿದೆ.
2023ರ ಜೂನ್ 11ರಂದು ಆರಂಭವಾದ ಈ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.
ವರದಿಯ ಪ್ರಕಾರ, ಬಿಎಂಟಿಸಿ ಕಳೆದ ಎರಡು ವರ್ಷಗಳಲ್ಲಿ — ಅಂದರೆ 2023ರ ಜನವರಿಯಿಂದ 2025ರ ಜನವರಿವರೆಗೆ, ಒಟ್ಟು 2.89 ಕೋಟಿ ಟ್ರಿಪ್‌ಗಳು ನಡೆಸಿದ್ದು, ಈ ಅವಧಿಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹಿಂದಿನಗಿಂತ 2.5 ಪಟ್ಟು ಹೆಚ್ಚಾಗಿದೆ. ಇದೀಗ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆ ಮತ್ತು ಪುರುಷ ಪ್ರಯಾಣಿಕರ ಅನುಪಾತ 60:40 ಆಗಿ ದಾಖಲಾಗಿದೆ.
ಗಮನಾರ್ಹ ವಿಚಾರವೆಂದರೆ, ಮಹಿಳಾ ಪ್ರಯಾಣಿಕರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿದರೂ, ಬಿಎಂಟಿಸಿಯ ಆದಾಯದಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ. ವಿರುದ್ಧವಾಗಿ, ಹಿಂದಿನ ಅವಧಿಗಿಂತಲೂ ಆದಾಯದಲ್ಲಿ ಏರಿಕೆ ದಾಖಲಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಇದೇ ವೇಳೆ ಮೆಟ್ರೋ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಫೀಡರ್ ಬಸ್‌ಗಳ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಸ್ಪಷ್ಟ ಏರಿಕೆ ಕಂಡುಬಂದಿದೆ. ಕೇವಲ ನಗರದ ಕೇಂದ್ರ ಭಾಗವಷ್ಟೇ ಅಲ್ಲ, ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿಯೂ ಸಾರ್ವಜನಿಕ ಸಾರಿಗೆ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




