ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಪೈಪೋಟಿ ದಿನೇದಿನೇ ತೀವ್ರಗೊಳ್ಳುತ್ತಿದೆ. ಈ ನಡುವೆ, ಸಿಎಂ ಸಿದ್ದರಾಮಯ್ಯರನ್ನು ಗಾದಿಯಿಂದ ಕೆಳಗಿಳಿಸುವ ಯತ್ನಗಳು ನಡೆಯುತ್ತಿರುವುದರ ಕುರಿತು ಅಹಿಂದ ವರ್ಗ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನಾಯಕತ್ವ ಬದಲಾವಣೆಯ ಮಾತುಗಳು ಜೋರಾಗುತ್ತಿದ್ದಂತೆ ಅಹಿಂದ ಸಮುದಾಯದ ನಾಯಕರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯರ ಬೆನ್ನಿಗೆ ನಿಂತಿರುವ ಅಹಿಂದ ವರ್ಗ, ಅವರನ್ನು ಸ್ಥಾನದಿಂದ ಕೆಳಗಿಳಿಸಲು ಯತ್ನಿಸಿದರೆ, ಪಕ್ಷದ ಒಳಗೆ ಮತ್ತು ರಾಜ್ಯದ ರಾಜಕೀಯದಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಸ್ಪಷ್ಟ ಹೇಳಿದ್ದಾರೆ.
ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಪುರಸಭೆ ಚುನಾವಣೆಗಳಲ್ಲೂ ಇದರ ಭಾರೀ ಪರಿಣಾಮ ಕಂಡುಬರಬಹುದು ಎಂದು ಅಹಿಂದ ನಾಯಕರು ಎಚ್ಚರಿಕೆ ರವಾನಿಸಿದ್ದಾರೆ. ಸಿದ್ದರಾಮಯ್ಯರನ್ನು ಬದಲಾಯಿಸುವ ಯಾವುದೇ “ಹುಚ್ಚು ಸಾಹಸ”ಕ್ಕೆ ಕೈ ಹಾಕಬಾರದೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ನೇರ ಸಂದೇಶ ಕಳುಹಿಸಲಾಗಿದೆ.
ಕೇವಲ ಕರ್ನಾಟಕದಲ್ಲೇ ಅಲ್ಲ, ಇಡೀ ದಕ್ಷಿಣ ಭಾರತದಾದ್ಯಂತ ಸಿದ್ದರಾಮಯ್ಯರ ಪರ ಬಲವಾದ ಅಹಿಂದ ಬೆಂಬಲವಿದೆ. ಸಿಎಂ ಬದಲಾವಣೆಗೆ ಮುಂದಾದರೆ ದಕ್ಷಿಣ ಭಾರತ ಮಟ್ಟದಲ್ಲೇ ರಾಜಕೀಯ ಪರಿಣಾಮ ತೀವ್ರವಾಗಲಿದೆ ಎಂಬ ಅಭಿಪ್ರಾಯ ಅಹಿಂದ ನಾಯಕರದು.
ಈ ಹಿನ್ನೆಲೆಯಲ್ಲಿ ಮೈಸೂರು, ಶಿವಮೊಗ್ಗ, ಕಲಬುರಗಿ ಮತ್ತು ಬೆಳಗಾವಿ ಸೇರಿದಂತೆ ನಾಲ್ಕು ಪ್ರಮುಖ ವಿಭಾಗಗಳಲ್ಲಿ ಅಹಿಂದ ವರ್ಗ ಶೀಘ್ರದಲ್ಲೇ ಮಹತ್ವದ ಸಭೆ ನಡೆಸಲು ನಿರ್ಧರಿಸಿದೆ. ಈ ಸಭೆಗಳ ಮೂಲಕ ಮುಂದಿನ ಹೋರಾಟದ ಮಾರ್ಗಸೂಚಿ ಮತ್ತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಲಿದೆ.
ಅಹಿಂದ ರಾಷ್ಟ್ರೀಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಅವರ ನೇತೃತ್ವದಲ್ಲಿ ಬೀದರ್‌ನ ಬಸವಕಲ್ಯಾಣದಿಂದ ಬೆಂಗಳೂರಿನವರೆಗೂ ಬೃಹತ್ ಹೋರಾಟ ನಡೆಸಲು ಸಿದ್ಧತೆ ನಡೆಯುತ್ತಿದೆ. ಈ ಹೋರಾಟದ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಸಿ ಮುಟ್ಟಿಸುವುದಾಗಿ ಅಹಿಂದ ನಾಯಕರು ಸ್ಪಷ್ಟಪಡಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ



