ಮುಸಲ್ಮಾನರ ಸಂಖ್ಯೆ ಹೆಚ್ಚಾಗಲ್ಲ; ಓವೈಸಿ ಕೊಟ್ಟ ಸ್ಟ್ರಾಂಗ್ ಮೆಸೇಜ್!

ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಎಂದಿಗೂ ಹಿಂದೂಗಳ ಸಂಖ್ಯೆಯನ್ನು ಮೀರುವುದಿಲ್ಲ ಎಂದು AIMIM ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ತೆಲಂಗಾಣದ ಪುರಸಭೆ ಚುನಾವಣೆ ಹಿನ್ನೆಲೆ ನಿಜಾಮಾಬಾದ್‌ನಲ್ಲಿ ಶುಕ್ರವಾರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಮಾಡಿದ ಭಾಷಣವನ್ನು ಉಲ್ಲೇಖಿಸಿದರು.

ಪ್ರಧಾನಿಯವರು ಇಡೀ ಪ್ರಪಂಚದ ಜನಸಂಖ್ಯೆ ವಯಸ್ಸಾಗುತ್ತಿರುವ ಸಂದರ್ಭದಲ್ಲಿ ಭಾರತ ಯುವ ಜನಸಂಖ್ಯೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಆದರೆ ಈ ಯುವ ಸಮೂಹಕ್ಕೆ ಸರ್ಕಾರ ಯಾವ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ? ಅವರಿಗೆ ಯಾವ ಕೌಶಲ್ಯ ತರಬೇತಿ ನೀಡಲಾಗಿದೆ? ಎಂದು ಓವೈಸಿ ಪ್ರಶ್ನಿಸಿದರು. ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 60 ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.

ಆದರೆ ಸರ್ಕಾರ ಯುವಕರ ಭವಿಷ್ಯದ ಬಗ್ಗೆ ಯೋಚಿಸುವ ಬದಲು ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಭಯ ಹುಟ್ಟಿಸಲಾಗುತ್ತಿದೆ ಎಂದು ಅವರು ಟೀಕಿಸಿದರು. ಇನ್ನು 20 ವರ್ಷಗಳ ಬಳಿಕ ಈ ಯುವ ಜನಸಂಖ್ಯೆಯೇ ವಯಸ್ಸಾಗಲಿದೆ. ಆಗ ಹಣದುಬ್ಬರ, ಉದ್ಯೋಗ ಹಾಗೂ ಜೀವನ ವೆಚ್ಚಗಳ ಬಗ್ಗೆ ಚಿಂತಿಸಬೇಕಾಗುತ್ತದೆ. ಆದರೆ ಈ ವಿಚಾರಗಳತ್ತ ಗಮನ ಕೊಡದೇ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಪ್ರಚಾರ ನಡೆಯುತ್ತಿದೆ ಎಂದು ಓವೈಸಿ ಆರೋಪಿಸಿದರು.

ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಸ್ಥಿರವಾಗಲಿದೆ. ಯಾವುದೇ ಕಾರಣಕ್ಕೂ ಹಿಂದೂ ಜನಸಂಖ್ಯೆಯನ್ನು ಮೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 25–30 ವರ್ಷಗಳ ನಂತರ ದೇಶದ ಜನಸಂಖ್ಯೆ ವಯಸ್ಸಾಗಲಿದೆ ಎಂಬ ವಾಸ್ತವ ಈಗ ಆಡಳಿತದಲ್ಲಿರುವವರಿಗೂ ಅರ್ಥವಾಗುತ್ತಿದೆ. ಈ ಹಿನ್ನೆಲೆ RSS ಮುಖ್ಯಸ್ಥ ಮೋಹನ್ ಭಾಗವತ್ ಕನಿಷ್ಠ ಮೂರು ಮಕ್ಕಳಿಗೆ ಜನ್ಮ ನೀಡುವಂತೆ ಹೇಳುತ್ತಿದ್ದಾರೆ. ಆದರೆ ಅವರು ಸ್ವತಃ ಅದನ್ನು ಪಾಲಿಸುತ್ತಾರೆಯೇ ಎಂಬುದು ಬೇರೆ ಪ್ರಶ್ನೆ ಎಂದು ವ್ಯಂಗ್ಯವಾಡಿದರು.

ವರದಿ : ಲಾವಣ್ಯ ಅನಿಗೋಳ

About The Author