ಮೈಸೂರು ಮತ್ತು ಬೆಂಗಳೂರಿನ ಜೀವನಾಡಿಯಾದ ಕಾವೇರಿ ಹಾಗೂ ಕಪಿಲಾ ನದಿಗಳು ಕೈಗಾರಿಕಾ ತ್ಯಾಜ್ಯ ಮತ್ತು ಸಂಸ್ಕರಿಸದ ಚರಂಡಿ ನೀರಿನಿಂದ ಭಾರೀ ಮಟ್ಟದಲ್ಲಿ ಕಲುಷಿತಗೊಳ್ಳುತ್ತಿವೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕೆಎಸ್‌ಪಿಸಿಬಿಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಈ ಕುರಿತು ಮಾತನಾಡಿದರು.
ನದಿಗಳ ಮಾಲಿನ್ಯ ತಡೆಗೆ ತುರ್ತು ಕ್ರಮಗಳ ಶಿಫಾರಸು ಒಳಗೊಂಡ ವರದಿಯನ್ನು ಮೈಸೂರು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ಸಲ್ಲಿಸಿದ್ದೇವೆ. ಆದರೆ ದುಃಖಕರ ಸಂಗತಿವೇನೆಂದರೆ, ಕಾವೇರಿ ಮತ್ತು ಕಪಿಲಾ ಎರಡೂ ನದಿಗಳು ಗಂಭೀರವಾಗಿ ಮಾಲಿನ್ಯಗೊಂಡಿವೆ. ನದಿಗಳನ್ನು ಉಳಿಸಲು ಆಡಳಿತ ಮಾತ್ರವಲ್ಲ, ನಾಗರಿಕರೂ ಮುಂದಾಗಬೇಕು ಎಂದು ಕರೆ ನೀಡಿದರು.
ನರೇಂದ್ರ ಸ್ವಾಮಿ ಅವರ ಪ್ರಕಾರ, ಕೆಲ ಕೊಳಚೆ ನೀರು ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ನೇರವಾಗಿ ನದಿಗಳಿಗೆ ಬಿಡಲಾಗುತ್ತಿದೆ. ಮೈಸೂರಿನಲ್ಲಿ ಪ್ರತಿದಿನ ಲಕ್ಷಾಂತರ ಹಾಲಿನ ಪ್ಯಾಕೆಟ್ ಕವರ್‌ಗಳು ಪರಿಸರಕ್ಕೆ ಅಪಾಯ ತಂದೊಡ್ಡುತ್ತಿವೆ. ತ್ಯಾಜ್ಯ ಬೇರ್ಪಡಿಸುವ ಅಭ್ಯಾಸದಿಂದಲೇ ಬದಲಾವಣೆ ಸಾಧ್ಯ ಎಂದು ಅವರು ಹೇಳಿದರು. ಕೊಡಗಿನ ಕಾಫಿ ಎಸ್ಟೇಟ್‌ಗಳು ನದಿಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ವಿಚಾರಕ್ಕೂ ಕಳವಳ ವ್ಯಕ್ತಪಡಿಸಿದರು. ಪರಿಸರವನ್ನು ನಿರ್ಲಕ್ಷಿಸುವುದು ಭವಿಷ್ಯವನ್ನು ನಿರ್ಲಕ್ಷಿಸುವಂತೆಯೇ. ಶುದ್ಧ ಗಾಳಿ ಮತ್ತು ನೀರು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನರೇಂದ್ರ ಸ್ವಾಮಿ ಎಚ್ಚರಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

