ಸರ್ಕಾರದ ನಿರ್ಲಕ್ಷ್ಯಕ್ಕೆ ಸಿದ್ಧಗಂಗಾ ಮಠದಲ್ಲಿ ನೀರಿನ ಸಮಸ್ಯೆ!

ಬಾಕಿ ಇದ್ದ 70 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಅನ್ನು ಪಾವತಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಒಂದು ವರ್ಷವಾದರೂ ಕಟ್ಟದ ಹಿನ್ನೆಲೆ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸುವ ಪ್ರಕ್ರಿಯೆ ಸಂಪೂರ್ಣ ಬಂದ್ ಆಗಿದೆ. ಈ ಹಿನ್ನೆಲೆ ಸಿದ್ಧಗಂಗಾ ಮಠಕ್ಕೆ ಮತ್ತೆ ನೀರಿನ ಹಾಹಾಕಾರ ತಲೆದೋರುವಂತಾಗಿದೆ.

ಕೆಐಎಡಿಬಿ ವಿದ್ಯುತ್ ಬಿಲ್‌ ಪಾವತಿಸದ ಹಿನ್ನೆಲೆ ಬೆಸ್ಕಾಂನವರು ವಿದ್ಯುತ್ ಸಂಪೂರ್ಣ ಕಡಿತಗೊಳಿಸಿದ ಪರಿಣಾಮ ಹೊನ್ನೇನಹಳ್ಳಿ ಪಂಪ್ ಹೌಸ್‌ನಲ್ಲಿ ನೀರು ಪೂರೈಕೆ ಬಂದ್ ಆಗಿದೆ. ಹೊನ್ನೆನಹಳ್ಳಿಯಿಂದ ದೇವರಾಯಪಟ್ಟಣ ಕೆರೆಗೆ ಬರುತ್ತಿದ್ದ ನೀರನ್ನು ಸಿದ್ದಗಂಗಾ ಮಠಕ್ಕೆ ಪಂಪ್ ಮಾಡಲಾಗುತ್ತದೆ. ಕಳೆದ 6 ತಿಂಗಳಿಂದ ಹೊನ್ನೇನಳ್ಳಿಯಿಂದ ನೀರು ಬಾರದ ಕಾರಣ ದೇವರಾಯಪಟ್ಟಣ ಕೆರೆ ಬರಿದಾಗಿದೆ. ಹೀಗಾಗಿ ಮುಂಬರುವ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಮಠಕ್ಕೆ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ. ಅಲ್ಲದೇ ಫೆಬ್ರವರಿ 6ರಿಂದ 20ರವರೆಗೂ ಮಠದಲ್ಲಿ ನಡೆಯುವ ಜಾತ್ರೆಗೂ ನೀರಿನ ಅಭಾವ ತಲೆದೋರಲಿದೆ ಎನ್ನಲಾಗಿದೆ.

ಕಳೆದ ವರ್ಷ ನೀರು ಪಂಪ್ ಮಾಡಿದ 70 ಲಕ್ಷ ವಿದ್ಯುತ್ ಬಿಲ್ ಅನ್ನು ಕೆಐಎಡಿಬಿ ಅಧಿಕಾರಿಗಳು ಮಠಕ್ಕೆ ಕೊಟ್ಟು ಎಡವಟ್ಟು ಮಾಡಿದ್ದರು. ಆ ವೇಳೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು 70 ಲಕ್ಷ ಬಿಲ್ ಅನ್ನು ನಾವೇ ಕಟ್ಟಿ ಮಠಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.

About The Author