ನವೆಂಬರ್ 11ರ ಮಂಗಳವಾರ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನಡೆಯಲಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಮರು ಮತ ಎಣಿಕೆ ನಡೆಯುತ್ತಿದ್ದು, ಕೋಲಾರ ನಗರ ಮತ್ತು ಮಾಲೂರು ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾಡಳಿತ ಈಗಾಗಲೇ ಮರು ಮತಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಕೋಲಾರ ನಗರ ಹಾಗೂ ಮಾಲೂರಿನಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ.
ಶಾಸಕ ಕೆ.ವೈ. ನಂಜೇಗೌಡ ಮತ್ತು ಮಾಜಿ ಶಾಸಕ ಮಂಜುನಾಥ್ ಗೌಡ ಮಧ್ಯೆ ಟಫ್ ಫೈಟ್ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಕೋಲಾರ ಮತ್ತು ಮಾಲೂರಿನಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಾಳೆ ಬೆಳಗ್ಗೆ 6 ಗಂಟೆಯಿಂದ ಬುಧವಾರ ಬೆಳಗ್ಗೆ 6 ಗಂಟೆವರೆಗೆ, ಕೋಲಾರ ನಗರ ಮತ್ತು ಮಾಲೂರು ತಾಲೂಕಿನಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಯಾವುದೇ ಸಂಭ್ರಮಾಚರಣೆಗೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕೋಲಾರದ ತೋಟಗಾರಿಕಾ ವಿವಿ ಕಾಲೇಜಲ್ಲಿ ಮರು ಮತಎಣಿಕೆ ನಡೆಯುತ್ತಿದೆ. ಒಂದು ಕೊಠಡಿಯಲ್ಲಿ 14 ಟೇಬಲ್‌ಗಳಲ್ಲಿ ಎಣಿಕೆ ನಡೆಯಲಿದೆ. ಸಂಪೂರ್ಣ ಪ್ರಕ್ರಿಯೆ 18 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರುತ್ತದೆ. ಇವಿಎಂ ಯಂತ್ರಗಳು ಮತ್ತು ಪೋಸ್ಟಲ್ ಬ್ಯಾಲೆಟ್‌ಗಳು ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿವೆ. ಬೆಳಗ್ಗೆ 8 ಗಂಟೆಗೆ ಎಣಿಕೆ ಆರಂಭವಾಗಲಿದೆ.
ಇನ್ನು, ಮತ ಎಣಿಕೆ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸೆಂಟ್ರಲ್ ಇಂಡಸ್ಟ್ರಿಯಲ್ ಫೋರ್ಸ್ ಭದ್ರತಾ ಪಡೆಯ ಸಿಬ್ಬಂದಿ ಸ್ಟ್ರಾಂಗ್ ರೂಂ ಕಾವಲಿಗೆ ನಿಯೋಜಿತರಾಗಿದ್ದಾರೆ. ಕೋಲಾರ ಮತ್ತು ಮಾಲೂರಿನಲ್ಲಿ ಒಟ್ಟು 600 ಪೊಲೀಸ್ ಸಿಬ್ಬಂದಿ ಭದ್ರತಾ ಕರ್ತವ್ಯ ನಿರ್ವಹಿಸಲಿದ್ದಾರೆ. ಕೋಲಾರ ಎಸ್‌ಪಿ ಬಿ. ನಿಖಿಲ್ ಅವರು ಮತ ಎಣಿಕಾ ಕೇಂದ್ರ ಪರಿಶೀಲಿಸಿ, ಸಂಪೂರ್ಣ ಬಂದೋಬಸ್ತ್ ಮಾಡಿಸಿದ್ದಾರೆ.




