ರಾಜ್ಯದಲ್ಲಿ ಕಳೆದ ಐದಾರು ದಿನಗಳಿಂದ ಮಳೆಯಾಗುತ್ತಿದ್ದು, ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಇಂದಿನಿಂದ ಮತ್ತೆ ಮಳೆಯ ಅಬ್ಬರ ಜೋರಾಗಲಿದೆ. ಅಂಡಮಾನ್ ಕರಾವಳಿಯ ಬಳಿ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಚಂಡಮಾರುತವಾಗಿ ಮಾರ್ಪಾಡಾಗುತ್ತಿದೆ. ಇದು ಈ ವರ್ಷದ ಮೊದಲ ಚಂಡಮಾರುತವಾಗಿದ್ದು, ಇದಕ್ಕೆ ಮೋಥಾ ಎಂದು ಹೆಸರಿಡಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಇದು ಅಕ್ಟೋಬರ್ 27 ರ ಸೋಮವಾರ ಬೆಳಿಗ್ಗೆ ಚಂಡಮಾರುತವಾಗಿ ತೀವ್ರಗೊಳ್ಳಬಹುದು. ಇದು ಮುಂದಿನ ದಿನಗಳಲ್ಲಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುವ ಈ ಹವಾಮಾನ ವ್ಯವಸ್ಥೆಯಿಂದಾಗಿ, ಒಡಿಶಾವನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ಇದಲ್ಲದೆ, ಮುಂದಿನ ಎರಡು ದಿನಗಳಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈತನ್ಮಧ್ಯೆ, ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯದ ಹಿನ್ನೆಲೆ, ದೆಹಲಿ ಸರ್ಕಾರ ಮುಂದಿನ ವಾರದ ಆರಂಭದಲ್ಲಿ ಮೋಡ ಬಿತ್ತನೆ ಅಥವಾ ಕೃತಕ ಮಳೆಯನ್ನು ಬಳಸಲು ಸಿದ್ಧತೆ ನಡೆಸುತ್ತಿದೆ.
ಇದರ ಪ್ರಭಾವ ಕರ್ನಾಟಕ ರಾಜ್ಯದ ಕೆಲ ಜಿಲ್ಲೆಗಳಲ್ಲೂ ಕಾಣಿಸಿಕೊಳ್ಳಲಿದ್ದು, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಸಕಲೇಶಪುರ, ಉತ್ತರ ಕರ್ನಾಟಕದ ಕೆಲ ಭಾಗದಲ್ಲಿ ಮಳೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ ಕೂಡ ಸಂಜೆ ನಂತರ ಮೋಡ ಮುಸುಕಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಐಎಂಡಿ ಮುನ್ಸೂಚನೆ ಪ್ರಕಾರ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಅಕ್ಟೋಬರ್ 28 ವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗುವುದರಿಂದ, ಕಡಲೂರು, ಪುದುಚೇರಿ, ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಮುಂತಾದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು.
ನಿನ್ನೆ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶವು, ಅಕ್ಟೋಬರ್ 27 ರಂದು ಚಂಡಮಾರುತವಾಗಿ ತೀವ್ರಗೊಳ್ಳಬಹುದು. ಮುಂದಿನ ಸೋಮವಾರದಿಂದ ಮೂರು ದಿನಗಳವರೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ, ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೋಥಾ ಚಂಡಮಾರುತ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ಎಚ್ಚರಿಕೆ ನೀಡಲಾಗಿದೆ. ಅಕ್ಟೋಬರ್ 28 ಮತ್ತು 30ರ ನಡುವೆ ದಕ್ಷಿಣ ಬಂಗಾಳದ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಪೂರ್ವ ಮತ್ತು ಪಶ್ಚಿಮ ಮೇದಿನಿಪುರ, ಜಾರ್ಗ್ರಾಮ್ ಮತ್ತು ಹೌರಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್ 28ರಂದು ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹೂಗ್ಲಿ ಜಿಲ್ಲೆಯಲ್ಲಿ ಗುಡುಗು ಮತ್ತು ಮಿಂಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

