ಉತ್ತರ ಕರ್ನಾಟಕದ ಖ್ಯಾತ ಕಾಮಿಡಿ ಸ್ಟಾರ್, ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ವಿವಾದಕ್ಕೆ ಸಿಲುಕಿದ್ದಾರೆ. ಮುಕಳೆಪ್ಪ ಮತ್ತು ಗಾಯತ್ರಿ ಜಾಲಿಹಾಳ್ ಅವರ ಅಂತರಧರ್ಮೀಯ ಪ್ರೇಮ ವಿವಾಹ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಫಾರ್ಮ್ ನಿವಾಸಿ ಖ್ವಾಜಾ ವಿರುದ್ಧ, ಸೆಪ್ಟೆಂಬರ್ 20ರಂದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವತಿಯ ಪೋಷಕರು ಹಿಂದೂ ಪರ ಸಂಘಟನೆಗಳ ಜೊತೆ ಹಾಜರಾಗಿ ದೂರು ನೀಡಿದ್ದಾರೆ.
ಮೂರು ತಿಂಗಳ ಹಿಂದೆ, ಜೂನ್ 5ರಂದು, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಖ್ವಾಜಾ–ಗಾಯತ್ರಿ ಮದುವೆ ನಡೆದಿದೆ. ಈ ಬಗ್ಗೆ ಲವ್ ಜಿಹಾದ್ ಆರೋಪಗಳು ಕೇಳಿಬಂದಿದ್ದರೂ, ಗಾಯತ್ರಿಯೇ ಸ್ವತಃ ಅದನ್ನು ತಳ್ಳಿ ಹಾಕಿದ್ದಾಳೆ. ಸೆಪ್ಟೆಂಬರ್ 24ರಂದು ದಂಪತಿ ವಿಡಿಯೋ ಬಿಡುಗಡೆ ಮಾಡಿ, ನಾವು ಮೂರು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ಮತಾಂತರ ಇಲ್ಲ, ಲವ್ ಜಿಹಾದ್ ಇಲ್ಲ. ಕಲಾವಿದರಲ್ಲಿ ಜಾತಿ–ಧರ್ಮದ ಅಂತರ ಇರಬಾರದು. ನಮಗೆ ಬಾಳಲು ಬಿಡಿ ಎಂದು ಮನವಿ ಮಾಡಿದ್ದರು.
ಆದರೆ, ಗಾಯತ್ರಿಯ ತಾಯಿ ಶಿವಕ್ಕಾ ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಾಂತರವಾಗಿಲ್ಲ ಎಂದರೆ ಕೊರಳಲ್ಲಿ ತಾಳಿ ಯಾಕಿಲ್ಲ? ಹಣೆಯಲ್ಲಿ ಕುಂಕುಮ ಯಾಕಿಲ್ಲ? ಮಗಳು ಖ್ವಾಜಾದ ಹೆಸರನ್ನು ಉರ್ದುವಿನಲ್ಲಿ ಕೈ ಮೇಲೆ ಬರೆಯಿಸಿಕೊಂಡಿದ್ದಾಳೆ. ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧ. ಖ್ವಾಜಾ ನನ್ನ ಮಗಳ ತಲೆ ಕೆಡಿಸಿದ್ದಾನೆ. ಅವಳನ್ನು ನಮ್ಮ ಬಳಿ ಬಿಟ್ಟು ಬಿಡಬೇಕು, ಇಲ್ಲವಾದರೆ ಸರಿಯಿರುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ




