ರಿಷಬ್ ಶೆಟ್ಟಿ ಅವರು ಕಾಂತಾರ: ಚಾಪ್ಟರ್–1 ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು. ಮೊದಲ ಕಾಂತಾರ ಚಿತ್ರ ರಿಷಬ್ ಅವರಿಗೆ ವಿಶಿಷ್ಟ ಯಶಸ್ಸು ನೀಡಿದರೆ, ಚಾಪ್ಟರ್–1 ಅದಕ್ಕಿಂತಲೂ ಭಿನ್ನ ರೀತಿಯ ಮೆಚ್ಚುಗೆ ಮತ್ತು ಗೌರವವನ್ನು ತಂದಿದೆ.
ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಿಷಬ್ ಶೆಟ್ಟಿ ತ್ರಿಶೂಲ ಹಿಡಿದು ಲಿಂಗದ ಪಕ್ಕ ನಿಂತಾಗ, ಅವರ ಕೊರಳಿಗೆ ಹಾವು ಸುತ್ತಿಕೊಳ್ಳುವ ಕ್ಷಣದಲ್ಲಿ, ಅವರು ಶಿವನ ರೌದ್ರಾವತಾರವನ್ನು ನೆನಪಿಸುತ್ತಾರೆ. ಅವರ ಕಣ್ಣುಗಳಲ್ಲಿ ಕಾಣುವ ಬೆಂಕಿಯ ನೋಟ ಪ್ರೇಕ್ಷಕರಿಗೆ goosebumps ಕೊಟ್ಟಿತ್ತು. ಈ ದೃಶ್ಯದಿಂದ ಶಿವಭಕ್ತರ ಹೃದಯದಲ್ಲಿ ರಿಷಬ್ ಅವರಿಗೆ ಅಪಾರ ಗೌರವ ಮತ್ತು ಅಭಿಮಾನ ಮೂಡಿದೆ.
ಚಿತ್ರದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಕಾಶಿಗೆ ತೆರಳಿ, ವಿಶ್ವನಾಥನ ದರ್ಶನ ಮಾಡಿದ್ದಾರೆ. ಗಂಗಾ ತಟದಲ್ಲಿ ಕುಳಿತು ಆರತಿಯ ದೃಶ್ಯವನ್ನೂ ಭಕ್ತಿ ಭಾವದಿಂದ ಕಣ್ತುಂಬಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾಶಿಯಲ್ಲಿಯೂ ರಿಷಬ್ ಅವರನ್ನು ಅಭಿಮಾನಿಗಳು ಗುರುತಿಸಿ, ಉತ್ಸಾಹದಿಂದ ಸ್ವಾಗತಿಸಿದ್ದಾರೆ.
ಕಾರಿನಿಂದ ಇಳಿಯುತ್ತಿದ್ದಂತೆಯೇ ಅಭಿಮಾನಿಗಳು ಅವರತ್ತ ಮುಗಿಬಿದ್ದು ಸೆಲ್ಫಿ ತೆಗೆದುಕೊಳ್ಳಲು ಹರಸಾಹಸ ಪಟ್ಟರು. ರಿಷಬ್ ಶೆಟ್ಟಿ ಸಹ ಆ ಎಲ್ಲರೊಂದಿಗೆ ಸ್ನೇಹಪೂರ್ಣವಾಗಿ ಮಾತನಾಡಿ, ಫೋಟೋ ಕ್ಲಿಕ್ ಮಾಡಿಸಿದರು. ಒಟ್ಟಿನಲ್ಲಿ, ಕಾಂತಾರ ಸಿನಿಮಾ ಕೇವಲ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ರಿಷಬ್ ಶೆಟ್ಟಿಯವರ ಜೀವನಕ್ಕೂ ಹೊಸ ಹಾದಿ ತೆರೆದು, ದೇಶದಾದ್ಯಂತ ಅವರಿಗೆ ಅಪಾರ ಅಭಿಮಾನಿ ಬಳಗವನ್ನು ನಿರ್ಮಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ