ಅತಿಥಿ ಉಪನ್ಯಾಸಕ ನೇಮಕಾತಿಯ ಹೋರಾಟಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 2025-26ನೇ ಶೈಕ್ಷಣಿಕ ಸಾಲು ಮುಗಿಯುವ ತನಕ, ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಸೆಪ್ಟೆಂಬರ್ 29ರಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದರಿಂದಾಗಿ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕರಣಕ್ಕೆ, ತಾತ್ಕಾಲಿಕವಾಗಿ ಪರಿಹಾರ ಸಿಕ್ಕಂತಾಗಿದೆ. ಅಡ್ವೊಕೇಟ್ ಜನರಲ್ ನೀಡಿರುವ ಕಾನೂನಿನ ಅಭಿಪ್ರಾಯ ಆಧರಿಸಿ, ಉನ್ನತ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಿ 2 ತಿಂಗಳು ಕಳೆದರೂ, ಅತಿಥಿ ಉಪನ್ಯಾಸಕರ ನೇಮಕಾತಿ ಗೊಂದಲದಿಂದಾಗಿ, ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿತ್ತು. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಇಬ್ಬರೂ ಮಾತುಕತೆ ನಡೆಸಿದ್ರೂ, ಕಾನೂನು ಪರಿಹಾರ ಸಿಕ್ಕಿರಲಿಲ್ಲ. ಬಳಿಕ ಎಜಿ ಅವರಿಂದ ಕಾನೂನು ಸಲಹೆ ಪಡೆದು ತೀರ್ಮಾನ ತೆಗೆದುಕೊಳ್ಳಲಾಗಿದೆ.
2025-26ನೇ ಸಾಲಿನ ಸೆಮಿಸ್ಟರ್ ಪೂರ್ಣಗೊಳ್ಳುವ ತನಕ, 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ, ಅತಿಥಿ ಉಪನ್ಯಾಸಕರನ್ನು ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರೆಸಬೇಕು. ಈ ರೀತಿ ಮುಂದುವರಿಕೆ ನಂತರವೂ, ಕಾರ್ಯಭಾರವಿದ್ದಲ್ಲಿ ಆ ಸ್ಥಳಕ್ಕೆ ಪ್ರಸ್ತುತ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ, ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸಲು ಸೂಚಿಸಿದೆ.