ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇತ್ತೀಚೆಗೆ ನಡೆದ ಗಣೇಶ ಮೆರವಣಿಗೆಯ ವೇಳೆ ಸಂಭವಿಸಿದ ಕಲ್ಲು ತೂರಾಟ ಸಂಭವಿಸಿದೆ. ಈ ಹಿಂಸಾತ್ಮಕ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದೆ. ಇದು ಈಗ ರಾಜಕೀಯದಲ್ಲಿ ಹೊಸ ಟೆನ್ಶನ್ ಶುರುವಾಗಿದೆ.
ಈ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದರು. ಸಹಿಸಿಕೊಳ್ಳೋ ಕಾಲ ಈಗಿಲ್ಲ. ಪ್ರತಿಯೊಂದು ಆಕ್ಷನ್‌ಗೆ ರಿಯಾಕ್ಷನ್ ಕೊಡುವ ಸಮಯ ಬಂದಿದೆ ಎಂದು ಗುಡುಗಿದರು.
ಮದ್ದೂರಿನಲ್ಲಿ ನಡೆದ ಘಟನೆಗಳನ್ನು ಮುಂದಿಟ್ಟುಕೊಂಡು ಮಾತನಾಡಿದ ಅವರು, ನಾಗಮಂಗಲದಲ್ಲಿ ಗಣಪತಿ ಮೆರವಣಿಗೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಯಿತು. ಈ ರೀತಿಯ ಘಟನೆಗೆ ಸರ್ಕಾರ ತಕ್ಷಣ ಮತ್ತು ತೀವ್ರ ಪ್ರತಿಕ್ರಿಯೆ ನೀಡಬೇಕಿತ್ತು. 2024ರ ಸೆಪ್ಟೆಂಬರ್‌ನಲ್ಲಿ ನಡೆದ ಈ ಘಟನೆಯಲ್ಲಿ ಕಲ್ಲು ತೂರಾಟ, ಬಾಂಬ್ ಸ್ಫೋಟಗಳು ಸೇರಿದಂತೆ ಹಿಂಸಾತ್ಮಕ ಘಟನೆಗಳು ನಡೆದವು. ಆಗ ಮದ್ದೂರು ಮಾದರಿ ಪ್ರತಿಕ್ರಿಯೆ ನೀಡಿದ್ದರೆ ಈ ಘಟನೆ ಮರುಕಳಿಸುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವರು, ಮೇಲ್ಮಟ್ಟದಲ್ಲಿ ರಾಜಕೀಯ ದಬ್ಬಾಳಿಕೆಯಿಂದ ನನ್ನ ಮೇಲೆ ಕೇಸು ಹಾಕಲಾಗಿದೆ. ಆದರೆ ಇದು ನನಗೆ ಹೊಸದು ಅಲ್ಲ. ನಾವು ಮತೀಯ ಭಯೋತ್ಪಾದನೆಯ ವಿರುದ್ಧ ಎದ್ದು ನಿಲ್ಲುತ್ತೇವೆ. ಹಿಂದುಗಳು ಹಾಗೂ ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿ ತೂಕಮಾಡುತ್ತಿರುವ ಸರ್ಕಾರದ ನೈತಿಕತೆ ಪ್ರಶ್ನಾರ್ಹವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿ.ಟಿ. ರವಿ ತಮ್ಮ ಪ್ರತ್ಯುತ್ತರದಲ್ಲಿ ಕೆ.ಜೆ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ದಂಗೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದರು. ಪೊಲೀಸ್ ಠಾಣೆಗಳು ಸುಟ್ಟಿದ್ದವು. ಆ ಪ್ರಕರಣಗಳನ್ನು ಸರ್ಕಾರವು ವಾಪಸ್ ಪಡೆಯಲು ಶಿಫಾರಸು ಮಾಡುತ್ತಿದೆ. ಇದು ನ್ಯಾಯವಿರೋಧಿ ಮತ್ತು ಜನತೆಯ ಭದ್ರತೆಗೆ ಧಕ್ಕೆಯಾಗುತ್ತದೆ ಎಂದು ಕಿಡಿಕಾರಿದರು.
ಇಂದಿನ ಕಾಂಗ್ರೆಸ್ ಸರ್ಕಾರದ ಶರಣಾಗತಿ ರಾಜಕಾರಣದಿಂದ ದೇಶವೇ ವಿಭಜನೆಯ ದಿಕ್ಕಿನಲ್ಲಿ ಸಾಗುತ್ತಿದೆ. ನಾವು ಏನು ಮಾಡಿದರೂ ರಕ್ಷಣೆ ಸಿಗುತ್ತೆ ಎಂಬ ಭಾವನೆ ಕಾಂಗ್ರೆಸ್‌ಗೆ ಬೆಳೆದಿದೆ. ಇದು ಜನತಾಪ್ರಜ್ಞೆಗೆ ಧಕ್ಕೆ. ನೀವು ಕಲ್ಲು ತೂರಿದವರನ್ನು ಕ್ಷಮಿಸಿ, ಎಫ್ಐಆರ್ ಹಿಂತೆಗೆದುಕೊಳ್ಳುತ್ತೀರಾ? ಯಾವ ಮುಖದಿಂದ ಇದು ಮಾಡುತ್ತೀರಿ? ಎಂಬುದಾಗಿ ಪ್ರಶ್ನಿಸಿದ ಸಿ.ಟಿ. ರವಿ, ಭಾರತ ವಿಭಜನೆಯ ಇತಿಹಾಸವನ್ನು ನೆನಪಿಸುವಂತೆ ಹೇಳಿದರು.
ವರದಿ : ಲಾವಣ್ಯ ಅನಿಗೋಳ