ಅಣ್ಣ–ತಮ್ಮ ಎನ್ನುವುದು ಕೇವಲ ಸಂಬಂಧವಲ್ಲ… ಅದು ಹೃದಯದಿಂದ ಹುಟ್ಟುವ ಸುಂದರ ಬಾಂಧವ್ಯ. ಆಸ್ತಿಗಾಗಿ ಜಗಳವಾಡುವ ಸಹೋದರರು ಒಂದು ಕಡೆ ಇದ್ದರೆ, ಬದುಕಿನ ಕೊನೆಯ ಕ್ಷಣಗಳಲ್ಲೂ ಬಾಂಧವ್ಯದ ನಂಟು ಅಳೆಯದ ಈ ಅಣ್ಣ–ತಮ್ಮರ ಕಥೆ ಮತ್ತೊಂದು ಕಡೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಇಡೀ ಊರನ್ನು ಮೌನದಲ್ಲಿ ಮುಳುಗಿಸಿದೆ.
24 ವರ್ಷದ ಬಸವರಾಜ ಬಾಗನ್ನವರ ಮತ್ತು ಕೇವಲ 16 ವರ್ಷದ ಸತೀಶ್ ಬಾಗನ್ನವರ — ಈ ಇಬ್ಬರು ಸಹೋದರರು ಜೀವದಲ್ಲೂ, ಸಾವಿನಲ್ಲೂ ಒಂದಾದರು. ಸತೀಶ್ 10ನೇ ತರಗತಿಯಲ್ಲಿ ಓದುತ್ತಿದ್ದ, ಎಲ್ಲರ ಜೊತೆ ಒಳ್ಳೆಯ ರೀತಿ ವರ್ತಿಸುತ್ತಿದ್ದ. ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದ ಸತೀಶ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಜ್ವರ ಮೆದುಳಿಗೆ ಏರಿ, ಅವನು ಮನೆಯಲ್ಲೇ ಕೊನೆಯುಸಿರೆಳೆದ.
ಇತ್ತ ತಮ್ಮ ಬದುಕುಳಿಯುವುದಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಅಣ್ಣ ಬಸವರಾಜನ ಹೃದಯ ಒಡೆದೊಗಿತ್ತು. ತಮ್ಮನನ್ನು ಓದಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡುವ ಕನಸು ಕಂಡಿದ್ದ ಬಸವರಾಜ್ ತೀವ್ರ ಆಘಾತದಿಂದ ಕುಸಿದುಬಿದ್ದರು. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ನಸುಕಿನ ವೇಳೆಗೆ ಅವರಿಗೂ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡರು.
ಬಟ್ಟೆ ಅಂಗಡಿಯಲ್ಲಿ ದಿನರಾತ್ರಿ ಶ್ರಮಪಟ್ಟು ದುಡಿಯುತ್ತಿದ್ದ ಬಸವರಾಜನಿಗೆ ತಮ್ಮನ ಭವಿಷ್ಯವೇ ಕನಸು. ಆದರೆ ವಿಧಿಯಾಟ ಬೇರೆ ಆಗಿತ್ತು… ತಮ್ಮನ ಸಾವಿನ ಸುದ್ದಿ ತಾಳಲಾರದೆ ಅಣ್ಣ ಕೂಡ ಪ್ರಾಣ ಬಿಟ್ಟಿದ್ದಾನೆ. ಇಬ್ಬರು ಸಹೋದರರನ್ನು ಒಂದೇ ಸಮಯದಲ್ಲಿ ಕಳೆದುಕೊಂಡ ಕುಟುಂಬದಲ್ಲಿ ಈಗ ಮಡುಗಟ್ಟಿದ ಮೌನ, ಕಣ್ಣೀರು ಮತ್ತು ನೆನಪುಗಳಷ್ಟೇ ಉಳಿದಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ