ಸೈಟ್ ತಗೊಂಡು ಮನೆ ಕಟ್ಟಿಲ್ವಾ? ಹಾಗಾದ್ರೆ ನಿಮಗೆ ದಂಡ ಫಿಕ್ಸ್ ಹೌದು ಬೆಂಗಳೂರು ನಗರದಲ್ಲಿ ನಿವೇಶನ ಖರೀದಿಸಿ ಮೂರು ವರ್ಷಗಳ ಒಳಗೆ ಮನೆ ನಿರ್ಮಿಸದೇ ಇರುವವರಿಗೆ ಬಿಡಿಎ ಶಾಕಿಂಗ್ ನ್ಯೂಸ್ ನೀಡಿದೆ. ನಿವೇಶನದಲ್ಲಿ ಮನೆ ಕಟ್ಟದೇ ಇರುವವರಿಗೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (BDA) ಶೀಘ್ರದಲ್ಲಿಯೇ ಶೇಕಡಾ 10 ರಷ್ಟು ನಿರ್ಮಾಣೇತರ ದಂಡ ವಿಧಿಸಲು ಮುಂದಾಗಿದೆ. ಈ ಕ್ರಮದ ಪರಿಣಾಮವಾಗಿ, ಕೆಲವು ಪ್ರದೇಶಗಳಲ್ಲಿ ದಂಡವು ಲಕ್ಷಗಳಲ್ಲಿ ಆರಂಭವಾಗಿ, ಕೋಟಿಗಳವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.
ಈ ನಿಮಯವನ್ನು ಬೆಂಗಳೂರು ನಗರದಲ್ಲಿ ಕಟ್ಟು ನಿಟ್ಟಾಗಿ ಜಾರಿ ಮಾಡಲು ಬಿಡಿಎ ಮುಂದಾಗಿದ್ದು, ನಿರ್ಮಾಣ ಪೂರ್ಣಗೊಳ್ಳದ ಹೊರತು ಮಾರಾಟ ಪತ್ರಗಳನ್ನು ನೀಡಲಾಗುವುದಿಲ್ಲ. ಅರ್ಕಾವತಿ, ನಾಡಪ್ರಭು ಕೆಂಪೇಗೌಡ ಬಡಾವಣೆಗಳಿಗೆ ಅಭಿವೃದ್ಧಿ ವಿಳಂಬದಿಂದ ವಿನಾಯಿತಿ ನೀಡಲಾಗಿದೆ. ಅಕ್ರಮ ವರ್ಗಾವಣೆಗಳಿಗೆ ಶೇ.25ರಷ್ಟು ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BDA ಬಡಾವಣೆಗಳಲ್ಲಿ ಹಂಚಿಕೆ ಪಡೆದವರು, ಅಧಿಕಾರದ ನಿಯಮದಂತೆ ಮೂರು ವರ್ಷಗಳಲ್ಲಿ ಮನೆ ಕಟ್ಟಬೇಕಾಗುತ್ತದೆ. ಆದರೆ, ಅನೇಕ ನಿವೇಶನಗಳು ವರ್ಷಗಳವರೆಗೆ ಖಾಲಿಯಾಗಿ ಬಿದ್ದಿರುವುದು, ಅಕ್ರಮ ವರ್ಗಾವಣೆಗಳು ಹಾಗೂ ಹೂಡಿಕೆ ಉದ್ದೇಶದ ಖರೀದಿ–ಮಾರಾಟಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಿಡಿಎ ಹೊಸ ದಂಡ ನೀತಿಯನ್ನು ಜಾರಿಗೆ ತಂದಿದೆ.
ಒಂದೆಡೆ ವರ್ಷದಿಂದ ವರ್ಷಕ್ಕೆ ನಗರದಲ್ಲಿ ಭೂಮಿಯ ಮೌಲ್ಯ ಏರಿಕೆಯಾಗುತ್ತಿದೆ. ಇದರಿಂದ ಬಿಡಿಎ ಅಭಿವೃದ್ಧಿಪಡಿಸಿ ಮಾರಾಟ ಮಾಡಿರುವ ನಿವೇಶನಗಳೂ ಹೊರತಾಗಿಲ್ಲ. ಆದರೆ, ಅನೇಕರು ಪ್ರಾಧಿಕಾರದ ನಿಯಮದನ್ವಯ ನಿಗದಿತ ಅವಧಿಯೊಳಗೆ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿಲ್ಲ. ಅಲ್ಲದೆ, ಬಿಡಿಎ ಅನುಮತಿ ಇಲ್ಲದೆ ಕಾನೂನುಬಾಹಿರವಾಗಿ ಮಾರಾಟ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ.
ಇದಕ್ಕೆ ತಡೆ ಹಾಕಲು, ಬಿಡಿಎ ನಿವೇಶನದ ಮಾರ್ಗಸೂಚಿ ಮೌಲ್ಯದ ಶೇ. 10ರಷ್ಟು ನಿರ್ಮಾಣೇತರ ದಂಡ ವಿಧಿಸುವುದಕ್ಕೆ ಮುಂದಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಪ್ರಾಧಿಕಾರ, ನಿರ್ಮಾಣ ಪೂರ್ಣಗೊಳ್ಳದ ಹೊರತು ಸೇಲ್ಡೀಡ್ (ಮಾರಾಟ ಪತ್ರ)ಗಳನ್ನು ನೀಡದಿರಲೂ ತೀರ್ಮಾನಿಸಿದೆ. ಅಭಿವೃದ್ಧಿಯಲ್ಲಿನ ವಿಳಂಬ, ಮೊಕದ್ದಮೆ, ಅಪೂರ್ಣ ಮೂಲಸೌಕರ್ಯಗಳ ಕಾರಣದಿಂದ ದಂಡದ ನಿಯಮದಿಂದ ಅರ್ಕಾವತಿ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆಗಳಿಗೆ ವಿನಾಯಿತಿ ನೀಡಿದೆ.
ಮಾರುಕಟ್ಟೆಯೇತರ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಾಧಿಕಾರ, 10 ವರ್ಷಗಳ ಕಾಲ ಆಸ್ತಿಯ ವರ್ಗಾವಣೆಯನ್ನು ನಿರ್ಬಂಧಿಸುವ ಒಪ್ಪಂದ ಕಮ್ ಸೇಲ್ ಡೀಡ್ಗಳನ್ನು ಜಾರಿಗೆ ತಂದಿತು. ನಂತರ ಅದನ್ನು ಐದು ವರ್ಷಗಳವರೆಗೆ ಇಳಿಸಿತು. ಅನೇಕ ಹಂಚಿಕೆದಾರರು 1960 ಮತ್ತು 1970ರ ದಶಕಗಳಲ್ಲಿ 5,000 ರೂ. ಪಾವತಿಸಿ ಪಡೆದ ನಿವೇಶನಗಳನ್ನು ಖಾಲಿ ಬಿಟ್ಟಿದ್ದು, ಪ್ರಸ್ತುತ ಇವುಗಳಲ್ಲಿ ಹಲವು ನಿವೇಶನಗಳ ಬೆಲೆಯು ಸುಮಾರು 10 ಕೋಟಿ ರೂ.ಗಳ ಮೌಲ್ಯದ್ದಾಗಿವೆ.
ಇನ್ನು ದಂಡ ಯಾವ ಪ್ರಮಾಣದಲ್ಲಿರುತ್ತದೆ? ಅನ್ನೋದನ್ನ ನೋಡೋದಾದ್ರೆ
ಈ ಹಿಂದೆ ದಂಡವನ್ನು ಸ್ಥಿರ ಪ್ರಮಾಮದಲ್ಲಿ ವಿಧಿಸಲಾಗಿತ್ತು 20×30 ಅಡಿ ನಿವೇಶನಗಳಿಗೆ 1.5 ಲಕ್ಷ ರೂಪಾಯಿ, 30×40 ಅಡಿ ನಿವೇಶನಗಳಿಗೆ 2 ಲಕ್ಷ ರೂಪಾಯಿ ಮತ್ತು 60×40 ಅಡಿ ನಿವೇಶನಗಳಿಗೆ 4 ಲಕ್ಷ ರೂಪಾಯಿ ಇತ್ತು. ಆದರೆ, ಕಳೆದ ವರ್ಷ ಬಿಡಿಎ ಈ ನೀತಿಯನ್ನು ಪರಿಸ್ಕರಿಸಿ, ನಿವೇಶನದ ಗಾತ್ರವನ್ನು ಲೆಕ್ಕಿಸದೆ ಚಾಲ್ತಿಯಲ್ಲಿರುವ ಮಾರ್ಗದರ್ಶನ ಮೌಲ್ಯದ ಶೇಕಡಾ 10 ರಷ್ಟು ದಂಡ ವಿಧಿಸಲು ತೀರ್ಮಾನ ಮಾಡಿತ್ತು. ಈ ಹೊಸ ನಿಯಮವು ಆಗಸ್ಟ್ 19, 2024 ರಿಂದ ಜಾರಿಗೆ ತರಲಾಗಿತ್ತು.
ಸಂಪೂರ್ಣ ಮಾಲೀಕತ್ವದ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದರೂ ಕೂಡ ಉಲ್ಲಂಘನೆಯನ್ನು ಕ್ರಮಬದ್ದಗೊಳಿಸಲು ವಿಫಲರಾಗಿರುವ ಅನೇಕ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ 50 ಪ್ರಕರಣಗಳು ಪತ್ತೆಯಾಗಿದ್ದವು.
ಒಂದು ವೇಳೆ ಬಿಡಿಎ ಅನುಮತಿಯಿಲ್ಲದೆ ಸೈಟ್ ಗಳನ್ನು ವರ್ಗಾಯಿಸಿದರೆ, ನಷ್ಟ ವಹಿವಾಟಿನ ಮೌಲ್ಯದ ಶೇಕಡಾ 25 ರಷ್ಟು ದಂಡ ವಿಧಿಸಲು ಬಿಡಿಎ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ನಿಯಮ ಸ್ಪಷ್ಟವಾಗಿದ್ದು, ಸೈಟ್ ಪಡೆದ ಬಳಿಕ ಅವರು ಮನೆ ನಿರ್ಮಿಸಬೇಕು, ಇಲ್ಲದಿದ್ದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ನಿರ್ಮಾಣ ಪೂರ್ಣಗೊಳ್ಳದಿದ್ದರೆ ಅವರಿಗೆ ಮಾರಾಟ ಪತ್ರವೂ ಸಿಗುವುದಿಲ್ಲ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ N.A ಹ್ಯಾರಿಸ್ ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




