ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಹೊರಟ ಬಿಜೆಪಿಯೊಳಗೆ, ಇದೀಗ ಅಸಮಾಧಾನ ಭುಗಿಲೆದ್ದಿದೆ. ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದಾಗ, ಬಿ.ವೈ ವಿಜಯೇಂದ್ರ ಅವರು ಸೌಜನ್ಯ ಮನೆಗೆ ಭೇಟಿ ಕೊಟ್ಟಿದ್ರು. ಇದೇ ವಿಚಾರ ನಾಯಕರ ನಡುವೆ ಭಿನ್ನಮುತ ಭುಗಿಲೇಳುವಂತೆ ಮಾಡಿದೆ. ಕೊನೆ ಕ್ಷಣದ ನಿರ್ಧಾರಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ಸೆಪ್ಟೆಂಬರ್ 1ರಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ, ಬಿಜೆಪಿಗರು ಧರ್ಮಸ್ಥಳ ಯಾತ್ರೆ ಕೈಗೊಂಡಿದ್ರು. ಮಂಜುನಾಥ ಸ್ವಾಮಿಯ ದರ್ಶನ ಬಳಿಕ ಬೃಹತ್ ಸಮಾವೇಶವನ್ನೂ ಮಾಡಿದ್ರು. ಎಲ್ಲವೂ ಅಂದುಕೊಂಡಂತೆಯೇ ಆಗಿತ್ತು. ಈ ಮಧ್ಯೆ, ಸೌಜನ್ಯ ತಾಯಿಯನ್ನು ವಿಜಯೇಂದ್ರ ಭೇಟಿಯಾಗಿದ್ರು. ಮಾತುಕತೆ ವೇಳೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾದ್ರೆ, ಅಗತ್ಯ ಕಾನೂನು ನೆರವು ನೀಡುವ ಭರವಸೆ ನೀಡಿ ಬಂದಿದ್ದಾರೆ. ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದು, ಬಿಜೆಪಿಯೊಳಗೆ ಭಿನ್ನರಾಗ ಮೂಡಿಸಿದೆ. ಬಿಜೆಪಿಯೊಳಗಿನ ಅಸಮಾಧಾನಕ್ಕೆ ಮುಖ್ಯವಾಗಿ 8 ಕಾರಣಗಳು ಇವೆ.
ಸಮಾವೇಶ ಮುಗಿದ ಬಳಿಕ ಶಿಕಾರಿಪುರದಲ್ಲಿ, ಬಿ.ವೈ. ವಿಜಯೇಂದ್ರ ಕಾರ್ಯಕ್ರಮ ನಿಗದಿಯಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಸೌಜನ್ಯ ನಿವಾಸಕ್ಕೆ ಭೇಟಿಗೆ ನಿರ್ಧರಿಸಲಾಗಿದೆ. ಕೇವಲ 15 ನಿಮಿಷಗಳ ಮೊದಲಷ್ಟೇ ಇತರೆ ನಾಯಕರಿಗೆ ಮಾಹಿತಿ ರವಾನಿಸಲಾಗಿದೆ. ಅಷ್ಟರಲ್ಲಿ ಅವರೆಲ್ಲಾ ಧರ್ಮಸ್ಥಳದಿಂದ ಬೆಂಗಳೂರಿಗೆ ಹೊರಟಿದ್ರು. ಪ್ರಹ್ಲಾದ್ ಜೋಶಿ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿ. ಸುನೀಲ್ ಕುಮಾರ್, ಡಿ.ವಿ. ಸದಾನಂದ ಗೌಡ ಬೆಂಗಳೂರಿನತ್ತ ಹೊರಟಿದ್ರು. ನಳೀನ್ ಕುಮಾರ್ ಕಟೀಲ್ ಕೂಡ ಮಂಗಳೂರಿನತ್ತ ಹೊರಟಿದ್ದರು. ಹೀಗಾಗಿ ಬಿಜೆಪಿಯ ಇತರೆ ನಾಯಕರು ವಿಜಯೇಂದ್ರ ಜೊತೆ ಸೌಜನ್ಯ ನಿವಾಸಕ್ಕೆ ತೆರಳಿರಲಿಲ್ಲ.
ಈ ಮೊದಲು ವಿಜಯೇಂದ್ರ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ವಿಚಾರ ಕೂಡ, ಬಿಜೆಪಿಯೊಳಗೆ ಬಿರುಕು ಮೂಡಿಸಿತ್ತು. ಪ್ಯಾಚ್‌ಅಪ್ ಮಾಡಿಕೊಂಡಿದ್ರೂ ಒಳಬೇಗುದಿ ನಿಂತಿರಲಿಲ್ಲ. ಆದರೂ, ಧರ್ಮಸ್ಥಳ ವಿಚಾರ ಎಲ್ಲರನ್ನೂ ಒಗ್ಗೂಡಿಸಿತ್ತು. ಆಷ್ಟರಲ್ಲಿ ಮತ್ತೆ ವಿಜಯೇಂದ್ರರ ಇಂಥಾ ನಡೆ, ಇತರೆ ನಾಯಕರನ್ನು ಕೆರಳುವಂತೆ ಮಾಡಿದೆ. ಧಾರ್ಮಿಕ ಕೇಂದ್ರದ ಪರವಾಗಿ ಸಮಾವೇಶ ನಡೆಸಿ ನಂತರ ಸೌಜನ್ಯ ನಿವಾಸಕ್ಕೆ ಭೇಟಿ ನೀಡಬೇಕಾದ ಅವಶ್ಯಕತೆ ಏನಿತ್ತು. ಆತುರದ ನಿರ್ಧಾರ ಏಕೆಂಬ ಆಕ್ಷೇಪವನ್ನ, ಆಂತರಿಕವಾಗಿ ಕೆಲ ಬಿಜೆಪಿ ನಾಯಕರು ಎತ್ತಿದ್ದಾರೆ. ಕಾಂಗ್ರೆಸ್ ವಿರುದ್ಧ ಧರ್ಮಯಾತ್ರೆಗೆ ಮುಂದಾಗಿದ್ದ ಬಿಜೆಪಿಯಲ್ಲೇ, ಹೊಸ ಭಿನ್ನರಾಗ ಶುರುವಾಗಿದೆ.

