ರಾಜ್ಯದ ಅಭಿವೃದ್ಧಿಗೆ, ಶಾಸಕರಿಗೆ ಸರಿಯಾದ ಅನುದಾನ ಸಿಗುತ್ತಿಲ್ಲ ಅನ್ನೋ ಕೂಗು ಜೋರಾಗಿದೆ. ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳಿಂದಲೂ ಗಂಭೀರ ಟೀಕೆಗಳು ಕೇಳಿಬರುತ್ತಿದೆ. ಈ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಡೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಹಿಂದೆ ಹಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗದೆ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿಯೂ ಹಾಗೂ ಜೆಡಿಎಸ್ ಪಕ್ಷವೂ, ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಆರೋಪಗಳೊಂದಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಹೆಚ್ಚಿಸಿದ್ದವು.
ಇಂತಹ ಪರಿಸ್ಥಿತಿಯಲ್ಲಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೇರಳ ರಾಜ್ಯದ ವಯನಾಡ್ ಜಿಲ್ಲೆಗೆ 10 ಕೋಟಿ ಅನುದಾನ ಬಿಡುಗಡೆ ಮಾಡಿದುದರಿಂದ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.
ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ 100ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡಿವೆ. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಸರ್ಕಾರ, ಸಂತ್ರಸ್ತ ಕುಟುಂಬಗಳಿಗೆ ಪುನರ್ ನಿವಾಸ ನಿರ್ಮಿಸಲು 10 ಕೋಟಿ ಅನುದಾನ ನೀಡಿದೆ. ಈ ಸಹಾಯಧನವನ್ನು ರಾಜ್ಯ ಸರ್ಕಾರವು ತನ್ನ ಸ್ಟೇಟ್ ಡಿಜಾಸ್ಟರ್ ರಿಲೀಫ್ ಫಂಡ್ (SDRF) ಅಡಿಯಲ್ಲಿ ಪೂರಕ ಅಂದಾಜು ಮೂಲಕ ಬಿಡುಗಡೆ ಮಾಡಿದೆ ಎಂದಿದೆ.
ಹೆಚ್ಚುವರಿಯಾಗಿ, ಉತ್ತರಕಾಂಡ ರಾಜ್ಯದಲ್ಲೂ ಪ್ರಾಕೃತಿಕ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರದಿಂದ ಸ್ಥಳಕ್ಕೆ ತೆರಳಿದ ಅಧಿಕಾರಿಗಳ ಪ್ರವಾಸ ವೆಚ್ಚವಾಗಿ 56.64 ಲಕ್ಷಗಳನ್ನು ಅನುದಾನವಾಗಿ ನೀಡಲಾಗಿದೆ. ಈ ಮೂಲಕ ಒಟ್ಟು 10 ಕೋಟಿ 56 ಲಕ್ಷಗಳ ಅನುದಾನವನ್ನು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿದೆ.
ಈ ಬೆಳವಣಿಗೆಯು ರಾಜ್ಯದ ವಿವಿಧ ಕ್ಷೇತ್ರಗಳ ಶಾಸಕರ ಕಣ್ಣು ಕೆಂಪಾಗುವಂತೆ ಮಾಡಿದೆ. ರಾಜ್ಯದಲ್ಲೇ ಅನುದಾನ ದೊರೆಯುತ್ತಿಲ್ಲ. ರಸ್ತೆಗಳು, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ಯೋಜನೆಗಳಿಗೆ ಬೇಕಾಗುವಷ್ಟು ಹಣವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಹೀಗಿರುವಾಗ, ಹೊರರಾಜ್ಯಕ್ಕೆ ಹತ್ತು ಕೋಟಿ ಕೊಡೋದು ಯಾವ ನ್ಯಾಯ? ಎಂಬ ಪ್ರಶ್ನೆ ಎದ್ದಿದೆ. ವಿರೋಧ ಪಕ್ಷಗಳು ಕೂಡ ಈ ಬಗ್ಗೆ ಸರ್ಕಾರವನ್ನು ಕಟುವಾಗಿ ಟೀಕಿಸುತ್ತಿದೆ. ಪ್ರಿಯಾಂಕಾ ಗಾಂಧಿ ಸಂಸದೆಯಾಗಿರುವ ಕ್ಷೇತ್ರವನ್ನೇ ಪ್ರತ್ಯೇಕವಾಗಿ ಅನುದಾನ ನೀಡಲಾಗಿದೆ ಎಂಬುದು ರಾಜಕೀಯ ಅನುಕೂಲತೆಯ ಉದಾಹರಣೆ ಎಂದು ಆರೋಪಿಸುತ್ತಿವೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

