Airshow2023
ಬೆಂಗಳೂರು(ಫೆ.13): ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಇಂಡಿಯಾ ಶೋಗೆ ಈಗಾಗಲೇ ಪ್ರಧಾನಿ ಮೋದಿ ಅದ್ಧೂರಿಯಾಗಿ ಚಾಲನೆ ನೀಡಿದರು. ಈ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಐದು ದಿನಗಳ ಕಾಲ ಟ್ರಾಫಿಕ್ ಜಾಮ್ ಕೊಂಚ ಹೆಚ್ಚಾಗಿರುವುದು. ಇನ್ನು ಬೆಂಗಳೂರಿನಲ್ಲಿ ಓಡಾಡುವ ಮಂದಿ ದಾರಿ ಬದಲಾವಣೆಯನ್ನು ಗಮನಿಸಬೇಕಾಗಿದೆ.
ಏರ್ಪೋರ್ಟ್ ಮಾರ್ಗದಲ್ಲಿ ವಾಹನ ದಟ್ಟನೆ ಹೆಚ್ಚಿರುವುದರಿಂದ ಏರ್ಪೋರ್ಟ್ಗೆ ಹೋಗುವ ಪ್ರಯಾಣಿಕರು ಕೊಂಚ ಬೇಗನೇ ಮನೆ ಅಥವಾ ಆಫೀಸ್ ಬಿಡಬೇಕಾಗಿರುತ್ತದೆ. ಮೊದಲೇ ಯಲಹಂಕ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಎಂಬುವುದು ತುಸು ಹೆಚ್ಚಾಗಿದೆ. ಇನ್ನು ಏರ್ ಪೋರ್ಟ್ ಕಡೆಗೆ ಹೋಗುವವರು ಹೆಣ್ಣೂರು ಜಂಕ್ಷನ್ ಬಳಿಯಿಂದ ಹೋಗಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಇದರಿಂದ, ಹೆಬ್ಬಾಳ, ಯಲಹಂಕ ಸುತ್ತಮುತ್ತ ದೊಡ್ಡ ಮಟ್ಟದ ಟ್ರಾಫಿಕ್ ಸೇರುವುದು ತಪ್ಪಿದೆ.
ಬದಲಾವಣೆಗಳು ಎಲ್ಲೆಲ್ಲಿ..?
ಬೆಂಗಳೂರಿನ ಪೂರ್ವಭಾಗದಿಂದ ಏರ್ಪೋರ್ಟ್ಗೆ ಹೋಗುವ ಪ್ರಯಾಣಿಕರು ಕೆಆರ್ ಪುರಂ ಹೆಣ್ಣೂರು ಕ್ರಾಸ್, ಮ್ಯಾಲನಹಳ್ಳಿ, ಬೇಗೂರು ಬ್ಯಾಕ್ ಗೇಟ್ ಮೂಲಕ ಏರ್ಪೋರ್ಟ್ ತಲುಪಬಹುದು. ಪಶ್ಚಿಮ ಭಾಗದಿಂದ ಏರ್ಪೋರ್ಟ್ಗೆ ಹೋಗುವವರು ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ, ವಿದ್ಯಾನಗರ್ ಕ್ರಾಸ್ ಮೂಲಕ ಹಾದು ಹೋಗಬಹುದು.
ಬೆಂಗಳೂರು ದಕ್ಷಿಣ ಭಾಗದಿಂದ ಏರ್ಪೋರ್ಟ್ಗೆ ಹೋಗಲು ಮೈಸೂರು ರಸ್ತೆ, ನಾಯಂಡಹಳ್ಳಿ, ಚಂದ್ರಲೇಔಟ್, ಗೊರಗುಂಟೆ ಪಾಳ್ಯ, ಬಿಇಎಲ್ ಸರ್ಕಲ್, ಗಂಗಮ್ಮ ಸರ್ಕಲ್, ಮದರ್ ಡೈರಿ, ಉನ್ನಿಕೃಷ್ಣನ್ ಜಂಕ್ಷನ್, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗನಹಳ್ಳಿ, ಎಂವಿಐಟಿ ಕ್ರಾಸ್ ಮತ್ತು ವಿದ್ಯಾನಗರ್ ಕ್ರಾಸ್ ಈ ಮಾರ್ಗ ಬಳಸಬಹುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.