ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿಇದೆ ವಾರಸುದಾರರಿಲ್ಲದ ₹157 ಕೋಟಿ !

ಮೈಸೂರು ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಠೇವಣಿ ಹಣವಾಗಿ ಸುಮಾರು ₹157 ಕೋಟಿ ಇರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗುರುತಿಸಿದೆ. ಈ ಹಣವನ್ನು ಅರ್ಹ ಗ್ರಾಹಕರು ಅಥವಾ ವಾರಸುದಾರರು ಪಡೆದುಕೊಳ್ಳುವಂತೆ ಆರ್‌ಬಿಐ ಅವಕಾಶ ನೀಡಿದೆ.

ಕೇಂದ್ರ ಸರ್ಕಾರದ ‘ನಿಮ್ಮ ಹಣ – ನಿಮ್ಮ ಅಧಿಕಾರ’ ಅಭಿಯಾನದಡಿ, ವರ್ಷಗಳಿಂದ ವಾಪಸ್ ಪಡೆಯದೇ ಉಳಿದಿರುವ ಹಣದ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ತಮ್ಮ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಖಾತೆಯಲ್ಲಿ ಹಣ ಬಾಕಿ ಉಳಿದಿದೆಯೇ ಎಂಬುದನ್ನು ಪರಿಶೀಲಿಸುವಂತೆ ಬ್ಯಾಂಕ್‌ಗಳು ಮನವಿ ಮಾಡಿವೆ.

ಯಾವುದೇ ಉಳಿತಾಯ ಅಥವಾ ಚಾಲ್ತಿ ಖಾತೆ 10 ವರ್ಷಗಳ ಕಾಲ ಚಲಾವಣೆಯಲ್ಲಿ ಇರದಿದ್ದರೆ, ಅದನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಖಾತೆಯಲ್ಲಿರುವ ಹಣವನ್ನು ‘ವಾರಸುದಾರರಿಲ್ಲದ ಠೇವಣಿ’ ಎಂದು ಗುರುತಿಸಿ, ಆರ್‌ಬಿಐಯ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲಾಗುತ್ತದೆ.

ಹಣವನ್ನು ವಾಪಸ್ ಪಡೆಯಲು ಸಂಬಂಧಿಸಿದ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬೇಕು. ಕೆವೈಸಿ ದಾಖಲೆಗಳು, ಠೇವಣಿ ವಿವರಗಳು, ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆಗಳು ಹಾಗೂ ಖಾತೆದಾರರು ಮೃತರಾಗಿದ್ದಲ್ಲಿ ಮರಣ ಪ್ರಮಾಣಪತ್ರ ಸಲ್ಲಿಸಬೇಕು. ಪರಿಶೀಲನೆ ಬಳಿಕ ಬ್ಯಾಂಕ್ ಹಣ ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author