ರಾಷ್ಟ್ರೀಯ ಹೆದ್ದಾರಿ 206ರ ಭೂ ಸ್ವಾಧೀನದ ಪರಿಹಾರ ದರ ನಿಗದಿಯಲ್ಲಿ ಅನ್ಯಾಯವಾಗಿದೆಯಂತೆ. ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಬೆಂಡೆಕೆರೆಯಲ್ಲಿ ರೈತರು ಆರೋಪಿಸಿದ್ದು, ರಸ್ತೆಯ ಮಧ್ಯೆ ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಮನೆ ಮತ್ತು ಜಮೀನು ವಶಕ್ಕೆ ಪಡೆಯುವ ಮೊದಲು, ಜಿಲ್ಲಾಡಳಿತ ಯಾವುದೇ ಮುನ್ಸೂಚನೆ ನೀಡಿಲ್ಲ ಎನ್ನಲಾಗ್ತಿದೆ. ಏಕಾಏಕಿ ಜೆಸಿಬಿ ಸಹಾಯದಿಂದ ಕಾಮಗಾರಿ ಪ್ರಾರಂಭಿಸಲು ಯತ್ನಿಸಿದ್ದು, ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಮುಂಜಾಗ್ರತೆಯಾಗಿ ಸ್ಥಳದಲ್ಲಿ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಶೀಲ್ದಾರ್ ಸಂತೋಷ್ ಕುಮಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಇನ್ನು, ಪಹಣಿಯಲ್ಲಿ ಆಗಿರುವ ದೋಷವನ್ನು 2 ವಾರಗಳಲ್ಲಿ ಸರಿಪಡಿಸಲು ತಹಶೀಲ್ದಾರ್‌ಗೆ ಸ್ಥಳದಲ್ಲೇ ನಿರ್ದೇಶನ ನೀಡಿದ್ದಾರೆ. ಈ ವೇಳೆ ಜಾಜೂರು ಗ್ರಾಮದಲ್ಲಿ ನೀಡಿದ ಪರಿಹಾರವನ್ನೇ, ಬೆಂಡೆಕೆರೆಯ ರೈತರ ಭೂಮಿಗೂ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಸರ್ಕಾರಿ ಜಾಗ ಹೊರತುಪಡಿಸಿ, ರೈತರ ಭೂಮಿಯಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ಬೆಂಡೆಕೆರೆ ಬಳಿ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

