ರಾಜ್ಯ ರಾಜಕೀಯದಲ್ಲಿ ದಲಿತ ನಾಯಕರಿಗೆ ಉನ್ನತ ಹುದ್ದೆ ಸಿಕ್ಕಿಲ್ಲ ಅನ್ನುವ ಕೊರಗಿತ್ತು. ಆ ಕೊರಗಿಗೆ ಕೊನೆಗಾಲ ಬಂದಿದೆ ಅನ್ಸುತ್ತೆ. ಸಿದ್ದರಾಮಯ್ಯ ಪುತ್ರ ಯತೀಂದ್ರರ ಆ ಒಂದು ಹೇಳಿಕೆ, ಅಹಿಂದ ನಾಯಕರೇ ಮುಂದಿನ ಸಿಎಂ ಎಂಬುದನ್ನ ಸಾರಿ ಸಾರಿ ಹೇಳುತ್ತಿದೆ.
ಸೆಪ್ಟೆಂಬರ್ ಕ್ರಾಂತಿ, ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ, ಪವರ್ ಶೇರಿಂಗ್ ವಿಚಾರ ಬಂದಾಗೆಲ್ಲಾ, ದಲಿತ ನಾಯಕತ್ವದ ಕೂಗು ಎದ್ದೇಳ್ತಿತ್ತು. ಜಿ. ಪರಮೇಶ್ವರ್, ಮಹದೇವಪ್ಪ, ಸತೀಶ್ ಜಾರಕಿಹೊಳಿ, 15 ದಿನಗಳ ಹಿಂದಷ್ಟೇ ಈ ಮೂವರು ಬೆಂಗಳೂರಿನಲ್ಲಿ ರಹಸ್ಯ ಸಭೆ ಮಾಡಿದ್ರು. ಬಳಿಕ ಸಿಎಂ ಜೊತೆ ಇದೇ ಮೂವರು ದಲಿತ ನಾಯಕರು ಪ್ರತ್ಯೇಕ ಮೀಟಿಂಗ್ ಮಾಡಿದ್ರು. ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳಿಗೆ, ಕ್ಯಾಶ್ಯುವಲ್ ಮೀಟಿಂಗ್ ಅಂತಾ ಹೇಳಿ ಸೈಲೆಂಟ್ ಆಗಿದ್ರು.
ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಕೂಡ ಅಕ್ಟೋಬರ್ 13ರಂದು ಸಂಪುಟ ಸಹೋದ್ಯೋಗಿಗಳಿಗಾಗಿ ಡಿನ್ನರ್ ಮೀಟಿಂಗ್ ಅರೇಂಜ್ ಮಾಡಿದ್ರು. ಈ ಬಗ್ಗೆಯೂ ಕೇಳಿದಾಗ, ಸಹಜವಾಗಿ ಔತಣಕೂಟ ಏರ್ಪಡಿಸಿದ್ದೇನೆ ಅಂತಾ ಹೇಳಿದ್ರು. ಆದ್ರೀಗ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವ ಸಮಯ ಬಂದಿದೆ. ಮೂವರು ದಲಿತ ಘಟಾನುಘಟಿ ನಾಯಕರ ಗುಪ್ತ ಸಭೆ, ಸಿದ್ದು ಜೊತೆಗಿನ ಮಾತುಕತೆ, ಔತಣಕೂಟ ಎಲ್ಲವೂ, ಮಳೆಗಿಂತ ಮೊದಲು ಬರುವ ಮಿಂಚು ಗುಡುಗಿನಂತೆ, ಸಿಎಂ ಬದಲಾವಣೆಯ ಮುನ್ಸೂಚನೆ ನೀಡಿದೆ.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ತಮ್ಮ ರಾಜಕೀಯ ಜೀವನದಲ್ಲಿ ಹಲವು ಮುಖ್ಯಮಂತ್ರಿಗಳ ಅಡಿಯಲ್ಲಿ, ಹಲವು ಖಾತೆಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸುದೀರ್ಘ 55 ವರ್ಷಗಳಿಗೂ ಅಧಿಕ ರಾಜಕೀಯ ಜೀವನದಲ್ಲಿ ಎಲ್ಲಾ ಸ್ಥಾನಮಾನಗಳನ್ನು ಪಡೆದಿರುವ ಖರ್ಗೆ ಅವರಿಗೆ, ಮುಖ್ಯಮಂತ್ರಿಯಾಗುವ ಯೋಗ ಕೂಡಿ ಬರಲೇ ಇಲ್ಲ.
ಬಹಳ ಹಿಂದಿನಿಂದಲೂ ದಲಿತ ವಿರೋಧಿ ಪಟ್ಟ ಕಟ್ಟಿಕೊಂಡಿರುವ ಕಾಂಗ್ರೆಸ್ ಇದೀಗ, ಮಹತ್ವರ ಬೆಳವಣಿಗೆಗೆ ಸಾಕ್ಷಿಯಾಗಲು ಸಿದ್ದವಾದಂತಿದೆ. ಕೊನೆಗೂ ದಲಿತ ನಾಯಕರೊಬ್ಬರು ಸಿಎಂ ಆಗೋಕೆ ತೆರೆಮರೆಯಲ್ಲಿ ವೇದಿಕೆ ಸಿದ್ದವಾಗ್ತಿದೆ ಅನ್ನೋ ಬಗ್ಗೆ, ಯತೀಂದ್ರ ಸಿದ್ದರಾಮಯ್ಯ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಜಿಲ್ಲೆಯವ್ರು. ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯವ್ರು. ಇಬ್ಬರೂ ದಲಿತ ನಾಯಕರು. ಜೊತೆಗೆ ಉತ್ತರ ಕರ್ನಾಟಕ ಭಾಗದವರು. ಖರ್ಗೆಯವರಿಗೆ ಕನಸಾಗೇ ಉಳಿದ ಸಿಎಂ ಪಟ್ಟ, ಮತ್ತೋರ್ವ ಉತ್ತರ ಕರ್ನಾಟಕದ ದಲಿತ ನಾಯಕರಿಗೆ ಸಿಗುವ ಮಾತು ಕೇಳಿ ಬಂದಿದೆ. ಯತೀಂದ್ರ ಸಿದ್ದರಾಮಯ್ಯನವರು ಸತೀಶ್ ಜಾರಕಿಹೊಳಿಗೆ ಜೈ ಅಂದಿರೋದು ರಾಜ್ಯ ರಾಜಕೀಯದಲ್ಲಿ ದಲಿತ ಸಿಎಂ ಆಸೆ ಮತ್ತೆ ಚಿಗುರುವಂತೆ ಮಾಡಿದೆ.