ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಬಳಿಕ ಒಬ್ಬೊಬ್ಬರಾಗಿ ಮುನ್ನೆಲೆಗೆ ಬರುವ ಪ್ರಯತ್ನದಲ್ಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೂ ಮುನ್ನವೇ ಕೆಲವು ನಾಯಕರು ತಮ್ಮದೇ ಆದ ರೀತಿಯಲ್ಲಿ ಹೈಕಮಾಂಡ್ ಒಲವು ಗಳಿಸೋಕೆ ಮುಂದಾಗಿದ್ದಾರೆ. ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ ಈಗಿನಿಂದಲೇ ಬಿಜೆಪಿಯಲ್ಲಿ ಹಲವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಂತೆ ಕಂಡು ಬರುತ್ತಿದೆ.
ಸದ್ಯ ಕೇಂದ್ರದಲ್ಲಿ ಸಚಿವರಾಗಿರುವ ವಿ. ಸೋಮಣ್ಣ ಅವರ ಹೆಸರು ಕೂಡಾ ರಾಜ್ಯಾಧ್ಯಕ್ಷರ ರೇಸ್‌ನಲ್ಲಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿಯೇ ಇತ್ತೀಚಿನ ದಿನಗಳಲ್ಲಿ ಸೋಮಣ್ಣ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಪಕ್ಷದಲ್ಲಿನ ಅಸಮಾಧಾನಗಳನ್ನು, ವೈ ಮ,ನಸ್ಸುಗಳನ್ನು ಪರಿಹರಿಸಲು ಮುಂದಾಗುತ್ತಿದ್ದಾರೆ.
ಇದನ್ನೂ ಓದಿ : ಕಿವಿ ತುಂಬಬೇಡ : ಎಚ್ಚರಿಕೆಯೋ? ಉದ್ದೇಶ ಪೂರ್ವಕವೋ?
ಹಲವು ತಿಂಗಳುಗಳಿಂದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಮುನಿಸಿತ್ತು. ಇದನ್ನು ಶಮನಗೊಳಿಸುವಲ್ಲಿ ಸೋಮಣ್ಣ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಪಕ್ಷದಲ್ಲಿನ ಅಂಕು – ಡೊಂಕುಗಳನ್ನು ಸರಿಪಡಿಸುವೆ. ಅವುಗಳನೆಲ್ಲ ಪರಿಹರಿಸಿ ಮುಂದೆ ಸಾಗುವ ಸಾಮರ್ಥ್ಯವಿದೆ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ನೀಡಲು ಪ್ರಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ಯಾಕೆಂದರೆ ಈ ಇಬ್ಬರ ನಡುವಿನ ಮುನಿಸು ಸಂಡೂರು ಉಪಚುನಾವಣೆಯಲ್ಲೂ ಜೋರಾಗಿತ್ತು. ಆದರೆ ಇದಕ್ಕೆ ಮುಲಾಮು ಹಚ್ಚಲು ಯಾವೊಬ್ಬ ಬಿಜೆಪಿ ನಾಯಕನೂ ಮುಂದೆ ಬಂದಿರಲಿಲ್ಲ. ಆದರೆ ಈ ಬಗ್ಗೆ ಸೋಮಣ್ಣ ಗಮನಹರಿಸಿದ್ದರು. ಇನ್ನೂ ಇತ್ತೀಚಿಗಷ್ಟೇ ವೈ ಮನಸ್ಸು ಮರೆತು ರೆಡ್ಡಿ-ರಾಮುಲು ಒಂದಾಗಿದ್ದಾರೆ.
ಈ ಬಗ್ಗೆ ಬೇಸರದಲ್ಲಿಯೇ ಪ್ರತಿಕ್ರಿಯಿಸಿರುವ ಸಚಿವ ಸೋಮಣ್ಣ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರೂ ಒಂದಾಗಲಿ ಎಂದು ಬಯಸಿ ಅದಕ್ಕೆ ಅಡಿಪಾಯ ಹಾಕಿದ್ದೇ ನಾನು. ಇದೀಗ ಇಬ್ಬರೂ ಸೇರಿಕೊಂಡು, ನನಗೆ ಒಳ್ಳೆಯ ಗಿಫ್ಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ರಾಜ್ಯಾಧ್ಯಕ್ಷರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸೋಮಣ್ಣ ಪಕ್ಷದ ನಾಯಕರ ಮುಂದೆ ತಮ್ಮ ಕಾರ್ಯವೈಖರಿಯಿಂದ ಗಮನ ಸೆಳೆಯಲು ಮುಂದಾಗಿದ್ದಾರೆ ಎಂಬ ಚರ್ಚೆಗಳು ಬಿಜೆಪಿಯಲ್ಲಿ ಕೇಳಿ ಬರುತ್ತಿವೆ.