ಬೆಂಗಳೂರು : ಧಾರ್ಮಿಕ ವಿಚಾರವಾಗಿ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಗಲಾಟೆ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ನಿಂದಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಇದೇ ವಿಚಾರಕ್ಕೆ ಈ ಪ್ರದೇಶಗಳಲ್ಲಿ ಭಾರೀ ಸಂಘರ್ಷ ಉಂಟಾಗಿತ್ತು. ರಾಜ್ಯಾದ್ಯಂತ ಸುದ್ದಿಯಾಗಿದ್ದ ಈ ಪ್ರಕರಣದ ಆರೋಪಿಗಳಿಗೆ ಇದೀಗ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಇನ್ನೂ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ತಪ್ಪೊಪ್ಪಿಕೊಂಡಿರುವ ಆರೋಪಿಗಳಿಗೆ ಎನ್‌ಐಎ ರಾಷ್ಟ್ರೀಯ ತನಿಖಾ ದಳದ ಕೋರ್ಟ್ ಕಠಿಣ ಶಿಕ್ಷೆ ನೀಡಿದೆ. ಪ್ರಕರಣದ ಮೂವರು ಆರೋಪಿಗಳಾದ ಸೈಯದ್ ಇಕ್ರಮುದ್ದೀನ್ ಅಲಿಯಾಸ್ ನವೀದ್ ಎನ್ನುವವನು ಇದರಲ್ಲಿ ಎ-14 ಆಗಿದ್ದಾನೆ. ಸೈಯದ್ ಆಸಿಫ್ ಎ-16 ಹಾಗೂ ಎ-18 ಮೊಹಮ್ಮದ್ ಅತೀಫ್‌ಗೆ 7 ವರ್ಷಗಳ ಕಾಲ ಕಠಿಣ ಶಿಕ್ಷೆ ಸೇರಿದಂತೆ ತಲಾ 46 ಸಾವಿರ ರೂಪಾಯಿ ದಂಡ ವಿಧಿಸಿ ಎನ್‌ಐಎ ನ್ಯಾಯಾಲಯ ಇಂದು ಆದೇಶಿಸಿದೆ.
ಅಲ್ಲದೆ ಈ ಪೋಸ್ಟ್ ಅನ್ನು ಆಗ ಶಾಸಕರಾಗಿದ್ದ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ವಿಚಾರವನ್ನಿಟ್ಟುಕೊಂಡು ಅವರ ಮನೆಗೆ ಬೆಂಕಿ ಹಚ್ಚಿದ್ದರು. ಮಾಜಿ ಶಾಸಕರ ಮನೆಯಲ್ಲಿನ ಎಲ್ಲ ಸಾಮಗ್ರಿಗಳನ್ನು ಸಂಪೂರ್ಣ ನಾಶ ಮಾಡಿದ್ದರು. ಗಲಾಟೆಯನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಗುಂಡು ಹಾರಿಸಿದ್ದರು. ಬಳಿಕ ಈ ಪ್ರಕರಣ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಈ ಕುರಿತು ಇದೀಗ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.