Thursday, July 10, 2025

Latest Posts

ಭಾರತೀಯ ಮಹಿಳೆಯರ ಸಿಂಧೂರ ಅಳಿಸಿ ಅಟ್ಟಹಾಸ ಮೆರೆದಿದ್ದ ಉಗ್ರ ಸಂಹಾರಕ್ಕೆ ಇವ್ರೇ ನೇತ್ರತ್ವ ವಹಿಸಿದ್ರು : ಯಾರವರು ಜಗತ್ತೇ ನಿಬ್ಬೆರಗಾಗಿ ನೋಡುತ್ತಿರುವ ಮಹಿಳಾ ಅಧಿಕಾರಿಗಳು..?

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ಭಾರತೀಯ ನಾರಿಯರ ಪವಿತ್ರ ಸಿಂಧೂರ ಅಳಿಸಿ ಹಾಕಿಸಿರುವ ಪಾಪಿ ಉಗ್ರರ ಸಂಹಾರ ಮಾಡಲು ಭಾರತ ಸರ್ಕಾರ ಮಾಡಿದ್ದ ಪ್ಲ್ಯಾನ್‌ ನಿಜಕ್ಕೂ ಗಮನಾರ್ಹವಾಗಿದೆ. ಬದುಕಿನ ಸಂತಸದ ಕ್ಷಣಗಳನ್ನು ಕಳೆಯಲು ಬಂದಿದ್ದ ದಂಪತಿಗಳ ಜೀವನದಲ್ಲಿ ಆಟ ಆಡಿದ್ದ ಪಾಕಿಸ್ತಾನದ ಭಯೋತ್ಪಾದಕರನ್ನು ಸಂಹರಿಸಲು ನಡೆಸಿರುವ ಆಪರೇಷನ್‌ ಸಿಂಧೂರ್‌ ಹೆಸರಿನ ಕ್ಷಿಪಣಿ ದಾಳಿ ಕಾರ್ಯಾಚರಣೆಯ ನೇತೃತ್ವವನ್ನು ಮಹಿಳಾ ಅಧಿಕಾರಿಗಳೇ ವಹಿಸಿಕೊಂಡಿದ್ದರು. ಇದು ಪಹಲ್ಗಾಮ್‌ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಎಲ್ಲ ಮಹಿಳೆಯರ ಪ್ರತೀಕಾರವಾಗಿ ಈ ಮಹಿಳಾ ಅಧಿಕಾರಿಗಳು ಉಗ್ರರನ್ನು ಸಂಹಾರ ಮಾಡಿಸುವ ಕಾರ್ಯದಲ್ಲಿ ಯಶಸ್ಸು ಪಡೆದಿದ್ದಾರೆ.

ಇನ್ನೂ ಭಾರತ ಸರ್ಕಾರ ನಡೆಸಿದ ಆಪರೇಷನ್‌ ಸಿಂಧೂರ್‌ ಕುರಿತು ಅಧಿಕೃತ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಇಬ್ಬರು ಮಹಿಳಾ ಅಧಿಕಾರಿಗಳು ಭಾಗಿಯಾಗಿದ್ದರು. ಅವರ ಮೂಲಕವೇ ಭಾರತ ಸರ್ಕಾರ ಭಯೋತ್ಪಾದಕರ ಸಂಹಾರದ ಸಿಹಿ ಸುದ್ದಿ ನೀಡುವ ಕಾರ್ಯ ಮಾಡಿರುವುದು ವಿಶೇಷವಾಗಿದೆ. ಭಾರತೀಯ ಸೇನೆಯಲ್ಲಿ ಮಹಿಳಾ ಕಮಾಂಡರ್‌ಗಳ ಸಂಖ್ಯೆ ಕಡಿಮೆ ಇದ್ದರೂ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳು ಅಧಿಕೃತ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದು ಎಲ್ಲರ ಗಮನ ಸೆಳೆದಿದೆ, ಅಲ್ಲದೆ ಈ ನಡೆಯು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಮುಖವಾಗಿ ಆಪರೇಷನ್‌ ಸಿಂಧೂರ್‌ ಬಗ್ಗೆ ಹೆಚ್ಚಿನ ವಿವರಣೆಯನ್ನು ಈ ಇಬ್ಬರು ಮಹಿಳಾ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ. ಭಾರತ ನಡೆಸಿರುವ ಉಗ್ರ ನಿಗ್ರಹ ಕಾರ್ಯಾಚರಣೆಯ ಗುರಿಗಳು, ಕಾರ್ಯತಂತ್ರಗಳು ಹೇಗಿದ್ದವು ಎನ್ನುವುದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ. ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್ ಹಾಗೂ ಸೋಫಿಯಾ ಖುರೇಷಿ ಈ ಇಬ್ಬರು ಮಹಿಳಾ ಅಧಿಕಾರಿಗಳು ತಮ್ಮ ನೇತೃತ್ವದಲ್ಲಿಯೇ ಪಾಕ್‌ ಬುಡಕ್ಕೆ ಬೆಂಕಿ ಇಡುವ ಕೆಲಸ ಮಾಡುವ ಮೂಲಕ ಭಾರತದ ಅಸ್ಮಿತೆಯನ್ನು ಕಾಪಾಡಿದ್ದಾರೆ.

ಉಗ್ರರ ಅಡಗು ತಾಣಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದೇವೆ..

ಇನ್ನೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಪಾಕಿಸ್ತಾನದ ಯಾವುದೇ ದುಸ್ಸಾಹಸವನ್ನು ಎದುರಿಸಲು ಭಾರತ ಸಿದ್ಧವಾಗಿದೆ. ನಮ್ಮ ಆಪರೇಷನ್‌ ಸಿಂಧೂರ್‌ನಲ್ಲಿ ಪಾಕಿಸ್ತಾನ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಪಾಕಿಸ್ತಾನ ಮತ್ತು ಪಿಒಕೆನಲ್ಲಿ 21 ಉಗ್ರ ತರಬೇತಿ ಕೇಂದ್ರಗಳನ್ನು ಗುರುತಿಸಲಾಗಿತ್ತು, ಭಾರತೀಯ ಸೇನೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ನಿರ್ಧಾರ ಮಾಡಿದ ಬಳಿಕ ಉಗ್ರರ ಅಡಗು ತಾಣಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದೇವೆ. ನಾವು ಪಾಕಿಸ್ತಾನ ಸೇನೆಯ ಯಾವುದೇ ಪ್ರದೇಶದ ಮೇಲೆ ದಾಳಿ ಮಾಡಿಲ್ಲ. ಎಲ್‌ಒಸಿಯಿಂದ 30 ಕಿಲೋ ಮೀಟರ್ ದೂರದಲ್ಲಿರುವ ಮುಜಾಫರಾಬಾದ್‌ನ ಸವಾಯಿ ನಾಲಾ ಕ್ಯಾಂಪ್. ಇಲ್ಲಿ ಲಷ್ಕರ್ ಉಗ್ರರ ತರಬೇತಿ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಉಗ್ರರ ನೆಲೆಗಳ ಮೇಲಿನ ದಾಳಿ ಸಂದರ್ಭದಲ್ಲಿ ಭಾರತೀಯ ಸೇನೆಯೂ ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ವಾರ್ ಹೆಡ್ ಗಳ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಿಕೊಂಡಿತ್ತು. ಇದು ಭಾರತೀಯ ಸೇನೆಯ ಸಾಮರ್ಥ್ಯವನ್ನು ತೋರಿಸುತ್ತಿದ್ದು, ಟಾರ್ಗೆಟ್‌ಗಳು ಖಚಿತವಾಗಿ ಉಗ್ರರ ಅಡುಗು ತಾಣಗಳು, ನಿಖರ ಕಟ್ಟಡಗಳು ಮತ್ತು ಕಂಬ್ರೇಕ್‌ಗಳಾಗಿತ್ತು. ಭಾರತ ಸೇನೆಯ ಆಪರೇಷನ್ ಹಾಗೂ ಕಾರ್ಯಾಚರಣೆಯ ದಕ್ಷತೆಯನ್ನು ಈ ದಾಳಿ ತೋರಿಸುತ್ತಿದೆ. ಭಾರತೀಯ ಸೇನೆಯೂ ಪಾಕಿಸ್ತಾನ ಕೈಗೊಳ್ಳುವ ಯಾವುದೇ ಪ್ರತಿದಾಳಿಗೂ ಸಿದ್ಧವಾಗಿದೆ ಎಂದು ವ್ಯೋಮಿಕಾ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪಾಕ್ ಬಾಲಬಿಚ್ಚಿದ್ದರೆ ನಾವು ಎಲ್ಲ ರೀತಿಯಲ್ಲೂ ಸಿದ್ಧವಾಗಿದ್ದೇವೆ…

ಬಳಿಕ ಮಾತನಾಡಿದ ಕರ್ನಲ್‌ ಸೋಫೀಯಾ ಖುರೇಷಿ, ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು ಪುರುಷರನ್ನು ಬಲಿ ಪಡೆದ ಬಳಿಕ ವಿಧವೆಯರಾದ ಮಹಿಳೆಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ವಿಶ್ವಾಸಾರ್ಹ ಗುಪ್ತಚರ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಉಗ್ರರ ಭಾಗಿದಾರಿಕೆಯ ಆಧಾರದ ಮೇಲೆ ಭಯೋತ್ಪಾದನಾ ಗುರಿಗಳನ್ನು ಆಯ್ಕೆ ಮಾಡಲಾಗಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನದಲ್ಲಿ ಯಾವುದೇ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ.

ಮಹಿಳಾ ಅಧಿಕಾರಿಗಳ ಆಯ್ಕೆಯು ಶಕ್ತಿ ಮತ್ತು ತ್ಯಾಗದ ಗುರುತನ್ನು ಪ್ರತಿಬಿಂಬಿಸುವ ಪ್ರಬಲ ಕ್ರಮವಾಗಿದೆ. ಇದು ಭಾರತದ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆ ಸಿಂಧೂರ್‌ಗೆ ಸಾಂಕೇತಿಕವಾಗಿದೆ. ಮುಂದಿನ ದಿನಗಳಲ್ಲಿ ಪಾಕ್ ಬಾಲಬಿಚ್ಚಿದ್ದರೆ ನಾವು ಎಲ್ಲ ರೀತಿಯಲ್ಲೂ ಸಿದ್ಧವಾಗಿದ್ದೇವೆ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಲುವಾಗಿ ಆಪರೇಷನ್ ಸಿಂಧೂರಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪಾಕಿಸ್ತಾನ ದಶಕಗಳಿಂದ ಉಗ್ರರಿಗೆ ತರಬೇತಿ ನೀಡಲು ವ್ಯವಸ್ಥಿತ ಕೇಂದ್ರಗಳನ್ನು ನಿರ್ಮಾಣ ಮಾಡಿದೆ. ಉಗ್ರರಿಗೆ ತರಬೇತಿ ನೀಡುವ ಕಂಪ್ಲೇಸ್‌ಗಳನ್ನು ಪಾಕ್ ನಿರ್ಮಾಣ ಮಾಡಿದ್ದು, ಇಂತಹ 9 ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಪಾಕಿಸ್ತಾನ ಹಾಗೂ ಪಾಕಿಸ್ತಾನ ಅಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಅವುಗಳನ್ನು ಯಶಸ್ವಿಯಾಗಿ ನಾಶಪಡಿಸಲಾಗಿದೆ. ಉಗ್ರರ ತರಬೇತಿ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಖುರೇಷಿ ವಿವರಿಸಿದ್ದಾರೆ.

ಎಂಜಿನಿಯರಿಂಗ್ ಪದವೀಧರೆ ವ್ಯೋಮಿಕಾ ಸಿಂಗ್..!

ಇನ್ನೂ ಅಷ್ಟಕ್ಕೂ ಈ ಇಬ್ಬರು ದಕ್ಷ ಮತ್ತು ದಿಟ್ಟ ಮಹಿಳಾ ಅಧಿಕಾರಿಗಳು ಯಾರು..? ಇವರ ಹಿನ್ನೆಲೆ ಏನು..? ಎನ್ನುವ ಕುತೂಹಲ ಇಡೀ ಜಗತ್ತಿಗೆ ಮೂಡಿದೆ. ಪ್ರಮುಖವಾಗಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಭಾರತೀಯ ವಾಯುಪಡೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದಾರೆ. ನ್ಯಾಷನಲ್ ಕೆಡೆಟ್ ಕಾಪ್‌ಗೆ ಸೇರಿ ನಂತರ ತಮ್ಮ ಎಂಜಿನಿಯರಿಂಗ್ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಅವರ ಕುಟುಂಬದಲ್ಲಿ ಸಶಸ್ತ್ರ ಪಡೆಗೆ ಸೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ, ವ್ಯೋಮಿಕಾ ಸಿಂಗ್ ಐಎಎಫ್‌ನಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನೇಮಕಗೊಂಡರು. ಅವರಿಗೆ 2,500 ಕ್ಕೂ ಹೆಚ್ಚು ಗಂಟೆಗಳ ಕಾಲ ಯುದ್ಧ ವಿಮಾನಗಳಲ್ಲಿ ಹಾರಾಟದ ಅನುಭವವಿದೆ. ಈಗ ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅವರು ರೂಪು ರೇಷೆಗಳು, ಸೇರಿದಂತೆ ಕಾರ್ಯಾಚರಣೆಯ ಕುರಿತಾಗಿ ವಿವರಣೆ ನೀಡಿದ್ದಾರೆ.

ಭಾರತೀಯ ಸೇನೆಯ ಸಿಗ್ನಲ್ಸ್ ಕಾರ್ಪ್ಸ್‌ನ ಅಧಿಕಾರಿ ಸೋಫಿಯಾ..

ಅಲ್ಲದೆ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಯಾರು? ಭಾರತೀಯ ಸೇನೆಯ ಮಾಧ್ಯಮಗೋಷ್ಠಿಯಲ್ಲಿ ಗಮನ ಸೆಳೆದ ಮತ್ತೋರ್ವ ಮಹಿಳಾ ಅಧಿಕಾರಿ ಈ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಗುಜರಾತ್‌ ಮೂಲದವರಾಗಿದ್ದಾರೆ. ಅವರು ಜೀವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಖುರೇಷಿ ಅವರ ಅಜ್ಜ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗೆ ಖುರೇಷಿ ಯಾಂತ್ರಿಕೃತ ಪದಾತಿ ದಳದ ಅಧಿಕಾರಿಯನ್ನು ವಿವಾಹ ಕೂಡ ಆಗಿದ್ದಾರೆ. ಹೀಗಾಗಿ ಇವರ ಕುಟುಂಬದಲ್ಲಿ ಸೇನೆಗೆ ಸಂಬಂಧಿದಂತೆ ಮೊದಲೇ ಕರ್ತವ್ಯ ನಿರ್ವಹಿಸಿದ್ದಾರೆ.ಇನ್ನೂ ಈ ಕರ್ನಲ್ ಸೋಫಿಯಾ ಖುರೇಷಿ ಭಾರತೀಯ ಸೇನೆಯ ಸಿಗ್ನಲ್ಸ್ ಕಾರ್ಪ್ಸ್‌ನ ಅಧಿಕಾರಿಯಾಗಿದ್ದಾರೆ. 2016 ರಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರು ಆಸಿಯಾನ್ ಪ್ಲಸ್ ಬಹುರಾಷ್ಟ್ರೀಯ ಕ್ಷೇತ್ರ ತರಬೇತಿ ವ್ಯಾಯಾಮ, ಫೋರ್ಸ್ 18 ನಲ್ಲಿ ಭಾರತೀಯ ಸೇನಾ ತರಬೇತಿ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಕೂಡ ಪಡೆದಿದ್ದಾರೆ. ಇದು ಭಾರತದ ನೆಲದಲ್ಲಿ ಇದುವರೆಗೆ ನಡೆಸಿದ ಅತಿದೊಡ್ಡ ವಿದೇಶಿ ಮಿಲಿಟರಿ ವ್ಯಾಯಾಮಗಳಲ್ಲಿ ಒಂದಾಗಿದೆ.

ವಿಡಿಯೋ ಸಮೇತ ಮಾಹಿತಿ..

ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳು ಈ ಜವಾಬ್ದಾರಿಯುತ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಯಾಕೆಂದರೆ ಕೇಂದ್ರ ಸರ್ಕಾರ ಕಳೆದ ಕೆಲ ದಿನಗಳ ಹಿಂದಿನಿಂದಲೂ ಈ ಭಯೋತ್ಪಾದನೆಯ ವಿರುದ್ಧ ತಕ್ಕ ಶಾಸ್ತಿಯನ್ನು ಮಾಡುವುದಾಗಿ ಹೇಳಿಕೊಂಡು ಬರುತ್ತಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಇಬ್ಬರು ಉಗ್ರರಿಗೆ ನೇರವಾಗಿ ಎಚ್ಚರಿಕೆ ನೀಡಿದ್ದರು. ಅಲ್ಲದೆ ಭಯೋತ್ಪಾದನೆಯ ವಿರುದ್ಧದ ಹಾಗೂ ಪ್ರತೀಕಾರದ ಹೋರಾಟವನ್ನು ನಡೆಸುತ್ತಿತ್ತು. ಇದಕ್ಕಾಗಿಯೇ ದೇಶಾದ್ಯಂತ ಮಾಕ್‌ ಡ್ರಿಲ್‌ಗೂ ಕರೆ ನೀಡಿತ್ತು. ಆದರೆ ಮಾಕ್‌ ಡ್ರಿಲ್‌ ಮುನ್ನವೇ ಭಾರತೀಯ ಸೇನೆ ವಿಡಿಯೋ ಸಮೇತ ಜಗತ್ತಿಗೆ ಭಾರತದ ಏರ್‌ಸ್ಟ್ರೈಕ್‌ ಬಗ್ಗೆ ಮಾಹಿತಿ ನೀಡಿದೆ. ಈ ಮೂಲಕ ದೇಶವನ್ನು ಹಗಲಿರುಳು ರಕ್ಷಣೆ ಮಾಡುತ್ತಿರುವ ಹೆಮ್ಮೆಯ ಸೇನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ನಾಲಿಗೆ ಚಪಲ ತೀರಿಸಿಕೊಳ್ಳುತ್ತಿದ್ದವರ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಈ ಇಬ್ಬರು ಛಲಗಾತಿ ಮಹಿಳಾ ಅಧಿಕಾರಿಗಳು ಮಾಡಿರುವುದು ನಿಜಕ್ಕೂ ಅಚ್ಚರಿಯಾಗಿದೆ.

- Advertisement -

Latest Posts

Don't Miss