Monday, June 16, 2025

Latest Posts

ಮಂತ್ರಿ ಮಾಡೋದಾಗಿ ಪ್ರಾಮಿಸ್‌ ಕೊಟ್ಟು ಕರೆತಂದಿದ್ದಾರೆ : ಸಂಚಲನಕ್ಕೆ ಕಾರಣವಾಯ್ತು “ಕೈ” ಶಾಸಕನ ಮಾತು..

- Advertisement -

ಹಾಸನ : ಜೆಡಿಎಸ್‌ ಪಕ್ಷದಲ್ಲಿದ್ದುಕೊಂಡು ದಳಪತಿಗಳ ರಕ್ಷಣೆಗೆ ನಿಲ್ಲುತ್ತಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ಸೇರಿದ್ದರು. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಸಂಪುಟ ವಿಸ್ತರಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಕಳಪೆ ಸಾಧನೆ ಮಾಡಿರುವ ಮಂತ್ರಿಗಳನ್ನು ಕೈ ಬಿಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ನಾಯಕರು ಇರುವುದರಿಂದ ಒಬ್ಬೊಬ್ಬ ಶಾಸಕರಲ್ಲಿ ಮಂತ್ರಿಗಿರಿಯ ಆಸೆ ಈಗಿನಿಂದಲೇ ಚಿಗುರೊಡೆಯುತ್ತಿದೆ.

ಇನ್ನೂ ಈಗಾಗಲೇ ಕಾಂಗ್ರೆಸ್‌ ಪಕ್ಷದ ಹಲವು ಶಾಸಕರು ಮಂತ್ರಿಗಿರಿಯ ಆಸೆಯನ್ನು ಹೊರಹಾಕಿದ್ದಾರೆ. ಈ ನಡುವೆಯೇ ಅಚ್ಚರಿಯೆಂಬಂತೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಂತ್ರಿಗಿರಿಯ ಕನಸು ಹೊರಹಾಕಿದ್ದಾರೆ.

ಈ ಕುರಿತು ಜಿಲ್ಲೆಯ ಅರಸೀಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿ ಸುಭದ್ರವಾಗಿ ಉಳಿದಿದೆ. ಯಾರು ಏನೇ ಬೊಂಬಡಿ ಹೊಡೆದುಕೊಂಡರು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯನವರು ಆರ್ಥಿಕ ತಜ್ಞರ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಅಂತ ಹೇಳಬಹುದು ಎಂದು ಸಿಎಂ ಅವರನ್ನು ಹಾಡಿ ಹೊಗಳಿದ್ದಾರೆ. ಬಡವರ ಮನೆಗಳಿಗೆ ಬೇರೆ ಬೇರೆ ಯೋಜನೆಗಳ ಮೂಲಕ ಪ್ರತಿ ತಿಂಗಳು 5,000 ರೂಪಾಯಿ ತಲುಪಿಸುವ ವ್ಯವಸ್ಥೆಯನ್ನು ಅವರು ಮಾಡಿದ್ದಾರೆ, ವಿರೋಧ ಪಕ್ಷಗಳು ಅವರನ್ನು ಟೀಕಿಸುತ್ತಿವೆ, ಯಾರೇನೇ ಕಾಮೆಂಟ್ ಮಾಡಿದರೂ ಅವರನ್ನು ಏನೂ ಮಾಡಕ್ಕಾಗಲ್ಲ ಎಂದು ಅವರು ಕಿಡಿ ಕಾರಿದ್ದಾರೆ,

ಪ್ರಾಮಿಸ್‌ ಮಾಡಿ ಕರೆದುಕೊಂಡು ಬಂದಿದ್ದಾರೆ..

ನನಗೆ ಮಂತ್ರಿ ಸ್ಥಾನ ಕೊಡ್ತೀವಿ ಅಂತ ಪ್ರಾಮಿಸ್ ಮಾಡಿ ಕರೆದುಕೊಂಡು ಹೋದರು. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದೆ ಅದ್ರಲ್ಲಿ ಏನು ಮುಚ್ಚು ಮರೆ ಇಲ್ಲ. ಸಿಎಂ ಸಿದ್ದರಾಮಯ್ಯನವರು ಸಚಿವ ಸ್ಥಾನ ಕೊಡ್ತೀವಿ ಅಂತ ಭರವಸೆ ನೀಡಿದ್ದಾರೆ. ಈಗಲೂ ಎರಡೂವರೆ ವರ್ಷ ಆದ ಮೇಲೆ ನಿಮಗೆ ಮಂತ್ರಿಗಿರಿ ಕೊಡ್ತೀನಿ ಅಂತ ಎಲ್ಲರ ಮುಂದೆ ಹಾಗೂ ಸಾರ್ವಜನಿಕ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟ ಪುನಾರಚನೆ ವೇಳೆ ನನ್ನನ್ನು ಪರಿಗಣಿಸುತ್ತಾರೆ ಎಂಬ ಭಾವನೆ ಇದೆ ಎಂದು ಹೇಳು ಮೂಲಕ ಶಿವಲಿಂಗೇಗೌಡ ಸಂಚಲನ ಮೂಡಿಸಿದ್ದಾರೆ.
ಪಕ್ಷ ಬಲಪಡಿಸಲು ಮಂತ್ರಿ ಸ್ಥಾನ ಬೇಕು..

ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದು ನಾನೊಬ್ಬನೇ. ಪಕ್ಷವನ್ನು ಬಲಪಡಿಸಿ ಬೇಕು ಅಂದರೆ ಮಂತ್ರಿ ಸ್ಥಾನ ಕೊಡಬೇಕು ಅನ್ನೋದು ರಾಷ್ಟ್ರೀಯ ನಾಯಕರ ಲೆಕ್ಕಾಚಾರ.ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂದು ಭಾವಿಸಿಕೊಂಡಿದ್ದೇನೆ. ಜಿಲ್ಲೆಯಲ್ಲಿ ಪಕ್ಷದ ಶಕ್ತಿ ವರ್ಧನೆಗೆ ನನಗೆ ಸಚಿವನಾಗಿ ಮಾಡುತ್ತಾರೆ ಎಂಬ ಭಾವನೆ ನನ್ನಲ್ಲೂ ಹಾಗೂ ಕ್ಷೇತ್ರದ ಜನರಲ್ಲೂ ಇದೆ ಎಂದು ಕಾಂಗ್ರೆಸ್‌ ಶಾಸರು ಹೇಳಿದ್ದಾರೆ.

ಸಿಎಂ ರಕ್ಷಣೆಗೆ ನಿಲ್ಲುವ ಶಿವಲಿಂಗೇಗೌಡ..

ಇನ್ನೂ ಪ್ರಮುಖವಾಗಿ ಈ ಶಿವಲಿಂಗೇಗೌಡರು ಜೆಡಿಎಸ್‌ನಲ್ಲಿದ್ದಾಗ ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತಿದ್ದರು. ಜೆಡಿಎಸ್‌ ವಿರುದ್ಧ ವಿಪಕ್ಷಗಳಿಂದ ಯಾವುದೇ ಹೇಳಿಕೆ ಹಾಗೂ ಟೀಕೆ ಟಿಪ್ಪಣಿಗಳು ವ್ಯಕ್ತವಾದರೆ ತಕ್ಷಣವೇ ಅವುಗಳಿಗೆ ತಿರುಗೇಟು ನೀಡುವ ಕೆಲಸ ಮಾಡುತ್ತಿದ್ದರು. ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಸೇರಿ ಶಾಸಕರಾದ ಅವರು ಡಿಸಿಎಂ ಡಿಕೆ ಶಿವಕುಮಾರ್‌, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿಯೇ ಬ್ಯಾಟಿಂಗ್‌ ಮಾಡುತ್ತಲೇ ಬಂದಿದ್ದಾರೆ.

ಸಿಎಂ ವಿರುದ್ಧ ಯಾವುದೇ ಆರೋಪಗಳು ಕೇಳಿ ಬಂದರೆ ಅದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ವಿಪಕ್ಷಗಳಿಗೆ ಕೌಂಟರ್‌ ಕೊಡುತ್ತಾರೆ. ಈ ಮೂಲಕ ರಾಜಕಾರಣದ ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಆಸರೆಗೆ ಶಿವಲಿಂಗೇಗೌಡ ಬರುತ್ತಾರೆ. ಅಲ್ಲದೆ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿ ಬಂದಿದ್ದ ಮೈಸೂರು ನಗರಾಭಿವೃದ್ದಿ ಮುಡಾ ಹಗರಣದ ಸಮಯದಲ್ಲೂ ಶಿವಲಿಂಗೇಗೌಡ ಎಲ್ಲ ಶಾಸಕರಿಗಿಂತಲೂ ಸಿಎಂ ಅವರ ಸಮರ್ಥನೆಗೆ ಮುಂದಾಗಿದ್ದರು. ಹೀಗಾಗಿ ಈ ಎಲ್ಲ ವಿಚಾರಗಳಿಂದ ಶಿವಲಿಂಗೇಗೌಡ ಮಂತ್ರಿಗಿರಿಯ ಮೇಲೆ ಕಣ್ಣಿಟ್ಟಿದ್ದಾರೆ.

- Advertisement -

Latest Posts

Don't Miss