ಬೆಂಗಳೂರು ಸಿಲಿಕಾನ್ ಸಿಟಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಅಚ್ಚರಿಯ ಟ್ವಿಸ್ಟ್ ಸಿಕ್ಕಿದೆ. RBI ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿ ಪರಾರಿಯಾದ ಮುಖ್ಯ ಆರೋಪಿಗಳು ರವಿ ಮತ್ತು ರಾಕೇಶ್, ತಮ್ಮ ಗರ್ಭಿಣಿ ಪತ್ನಿಯರ ಆರೋಗ್ಯ ವಿಚಾರಿಸಲು ಸಂಪರ್ಕ ಸಾಧಿಸಿದ ಕಾರಣ ಬೇಗನೆ ಪೊಲೀಸರ ಜಾಲಕ್ಕೆ ಸಿಕ್ಕಿದ್ದಾರೆ. ದರೋಡೆ ಬಳಿಕ ಮನೆಯಲ್ಲಿ ಒಬ್ಬರೇ ಉಳಿದ ಪತ್ನಿಯರ ಬಗ್ಗೆ ಆತಂಕಗೊಂಡ ಆರೋಪಿಗಳು ಹೊಸ ಸಿಮ್ ಖರೀದಿಸದೇ, ಕ್ಯಾಬ್ ಚಾಲಕನ ಮೊಬೈಲ್ ಮೂಲಕ ಕರೆ ಮಾಡಿದುದು ಪತ್ತೆಗೆ ಪ್ರಮುಖ ಸುಳಿವಾಯಿತು.
ದರೋಡೆ ನಂತರ ಇಬ್ಬರೂ ಮೊದಲಿಗೆ ಹೊಸೂರಿಗೆ, ನಂತರ ₹10,000 ನೀಡಿ ಹೈದರಾಬಾದ್ ಗೆ ಕ್ಯಾಬ್ ಬುಕ್ ಮಾಡಿಕೊಂಡಿದ್ದರು. ಅದೇ ಚಾಲಕನ ನಂಬರ್ ಮೂಲಕ ಕರೆ ಹೋಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಆರೋಪಿಗಳ ಪತ್ನಿಯರ ವಿಚಾರಣೆ ವೇಳೆ ಅವರು ಪಡೆದ ಕರೆಗಳಿಂದ ಆರೋಪಿಗಳಿಂದ ಬಂದ ಮೊದಲ ಸ್ಥಳಸೂಚನೆ ದೊರಕಿತು. ನಂತರ ಹೈದರಾಬಾದ್‌ನ ಲಾಡ್ಜ್ ಸಿಸಿಟಿವಿ ಪರಿಶೀಲನೆಯಲ್ಲಿ, ಹಣ ತುಂಬಿದ ಬ್ಯಾಗ್ ಜೊತೆ ಹೊರಡುವ ದೃಶ್ಯಗಳು ಕಂಡುಬಂದವು. ಈ ಆಧಾರದ ಮೇಲೆ ಪೊಲೀಸರು ರೈಲ್ವೆ ಸ್ಟೇಷನ್‌ನಲ್ಲಿ ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದರು. ಬಂಧನದ ವೇಳೆ ಪತ್ನಿಯರ ಬಗ್ಗೆ ಆತಂಕದಿಂದ ಇಬ್ಬರೂ ಕಣ್ಣೀರು ಹಾಕಿರುವುದಾಗಿ ಪೊಲೀಸರು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾಪುರ ಪೊಲೀಸರು CMS ವಾಹನ ಹೈಜಾಕ್ ಸ್ಥಳ, ಡೈರಿ ಸರ್ಕಲ್ ದರೋಡೆ ಸ್ಥಳ, ಬಾಣಸವಾಡಿ ಯೋಜನೆ ಸ್ಥಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಹಜರು ನಡೆಸಿದ್ದಾರೆ. ಹೇಗೆ ವಾಹನ ನಿಲ್ಲಿಸಲಾಯ್ತು, ಹೇಗೆ ಸಿಬ್ಬಂದಿಗೆ ಭಯ ಹುಟ್ಟಿಸಲಾಯ್ತು ಹಾಗೂ ದರೋಡೆ ನಡೆಯಿತು ಎಂಬುದು ಸ್ಥಳದಲ್ಲೇ ಸೀನ್ ರಿಕ್ರಿಯೇಷನ್ ಮೂಲಕ ದಾಖಲಿಸಲಾಯಿತು. ಕುಪ್ಪಂ, ಚಿತ್ತೂರು ಹಾಗೂ ಹೈದರಾಬಾದ್‌ನಲ್ಲಿ ಪತ್ತೆಯಾದ ಕಾರು, ಹಣ ಮತ್ತು ಲಾಡ್ಜ್ಗಳಲ್ಲಿಯೂ ಮಹಜರು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

