ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಹೋಬಳಿ ವ್ಯಾಪ್ತಿಯಲ್ಲಿ, ಇತ್ತೀಚೆಗೆ ನಡೆದ ಸರಣಿ ಕಳ್ಳತನಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ದೇಗುಲಗಳು, ಅಂಗಡಿಗಳು, ಹಾಗೂ ಮನೆಗಳಲ್ಲಿ ನಡೆಯುತ್ತಿರುವ ಕಳ್ಳತನಗಳಿಂದ ಸ್ಥಳೀಯರು ನಿದ್ದೆ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದೊಳಗೆ ನಾಲ್ಕು-ಐದು ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಕಳ್ಳರ ಹಾವಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ಇತ್ತೀಚಿನ ಘಟನೆಯಾಗಿ, ತಾಲೂಕಿನ ಗಂಜೀಗೆರೆ ಗ್ರಾಮದಲ್ಲಿ ನೆನ್ನೆ ರಾತ್ರಿ ಸರಣಿ ಕಳ್ಳತನ ನಡೆದಿದೆ. ಗ್ರಾಮಸ್ಥ ರಾಜಪ್ಪ ಅವರ ಪೆಟ್ಟಿಗೆ ಅಂಗಡಿಗೆ ಕನ್ನ ಬಿದ್ದಿದ್ದು, ಅಂಗಡಿಯಿಂದ ಕಳ್ಳರು ಒಂದು ಲಕ್ಷ ರೂಪಾಯಿ ನಗದು, ಸಿಗರೇಟ್ ಹಾಗೂ ಗುಟ್ಕಾ ಪ್ಯಾಕೆಟ್‌ಗಳನ್ನು ಕದ್ದೊಯ್ದಿದ್ದಾರೆ.
ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಖದೀಮನ ಕೃತ್ಯಗಳು ಸ್ಪಷ್ಟವಾಗಿ ದಾಖಲಾಗಿದ್ದು, ಪೊಲೀಸರು ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಳ್ಳತನಗಳ ಹಿನ್ನೆಲೆ, ಬೂಕನಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಿ, ಕಳ್ಳತನಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ. ಜನರ ಭದ್ರತೆಗಾಗಿ ರಾತ್ರಿ ಪಾಳಿ ಗಸ್ತು ಬಲಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ