ಹಾಸನ: ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತದ ಪ್ರಕರಣಗಳಿಂದ ಜನರಲ್ಲಿ ಆತಂಕ ಮೂಡಿದೆ. ಯುವಕರನ್ನೇ ಟಾರ್ಗೆಟ್ ಮಾಡಿರುವಂತೆ ಸಂಭವಿಸುತ್ತಿರುವ ಹಾರ್ಟ್ ಅಟ್ಯಾಕ್ಗೆ ಎಲ್ಲರೂ ಬೆಚ್ಚಿ ಬೀಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೃದಯ ತಪಾಸಣೆ ನಡೆಸುತ್ತಿದೆ. ಇದರಿಂದ ಹಂತ ಹಂತವಾಗಿ ಜನರಲ್ಲಿನ ಭೀತಿ ದೂರವಾಗುತ್ತಿದೆ.
ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಸೂಚನೆಯ ಮೇರೆಗೆ ಈ ಹೃದಯಾ ತಪಾಸಣಾ ಶಿಬಿರ ನಡೆಯುತ್ತಿದೆ. ಇದರಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ ಕಳೆದ ವಾರದಿಂದ ಆರೋಗ್ಯ ಇಲಾಖೆಯು ತಂಡೋಪತಂಡವಾಗಿ ಜಿಲ್ಲೆಯ ಶಾಲೆಗಳಿಗೆ ತೆರಳಿ ಹೃದಯ ತಪಾಸಣೆ ಮುಂದುವರೆಸಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 1,185 ಶಾಲೆಗಳಲ್ಲಿ ಸುಮಾರು 56,000 ವಿದ್ಯಾರ್ಥಿಗಳಿಗೆ ಹಾರ್ಟ್ ಚೆಕ್ ಮಾಡಲಾಗಿದೆ. ಇದರಲ್ಲಿ 112 ವಿದ್ಯಾರ್ಥಿಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿವೆ ಎಂಬುದಾಗಿ ಪ್ರಾಥಮಿಕ ಮಾಹಿತಿಯಲ್ಲಿ ಬಯಲಾಗಿದೆ. ಹೀಗಾಗಿ ಈ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಮುಖ್ಯವಾಗಿ ಆರು ಮಂದಿ ಚಾಲಕರ ಸಾವಿನ ಹಿನ್ನೆಲೆಯಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ, 15 ವರ್ಷದ ಮಕ್ಕಳಿಗೆ ಹೃದಯ ತಪಾಸಣೆ, ಶಾಲೆ-ಕಾಲೇಜುಗಳಲ್ಲಿ ಸಿಪಿಆರ್ ತರಬೇತಿ, ಮತ್ತು PHC/CHCಗಳಲ್ಲಿ ಹೃದಯ ಜ್ಯೋತಿ ಯೋಜನೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ, ಸಾಕಷ್ಟು ನಿದ್ರೆ, ಒತ್ತಡ ನಿರ್ವಹಣೆಗೆ ಒತ್ತು ನೀಡಬೇಕು ಎಂದು ಸಚಿವ ರಾಜಣ್ಣ ಈಗಾಗಲೇ ತಿಳಿಸಿದ್ದಾರೆ.
ಪ್ರಮುಖವಾಗಿ ಜಿಲ್ಲಾದ್ಯಂತ ಎಳೆ ವಯಸ್ಸಿನ ಯುವಕ- ಯುವತಿಯರಲ್ಲಿ ಹೃದಯಾಘಾತಗಳು ಸಂಭವಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿಯೇ ಆರೋಗ್ಯ ಇಲಾಖೆಗೆ ಹೃದಯ ತಪಾಸಣೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.